ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ಮಾಜಿ ಸಿಎಂ ಒಮ್ಮನ್ ಚಾಂಡಿ ಬೆಂಗಳೂರಿಗೆ ಸ್ಥಳಾಂತರ

ಅನಾರೋಗ್ಯದಿಂದ ತಿರುವನಂತಪುರಂ ಬಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಶನಿವಾರ ತಿಳಿಸಿದ್ದಾರೆ.  
ಕೇರಳ ಮಾಜಿ ಸಿಎಂ ಒಮ್ಮನ್ ಚಾಂಡಿ
ಕೇರಳ ಮಾಜಿ ಸಿಎಂ ಒಮ್ಮನ್ ಚಾಂಡಿ
Updated on

ತಿರುವನಂತಪುರಂ: ಅನಾರೋಗ್ಯದಿಂದ ತಿರುವನಂತಪುರಂ ಬಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಶನಿವಾರ ತಿಳಿಸಿದ್ದಾರೆ.  

ಆಸ್ಪತ್ರೆಗೆ ಭೇಟಿ ನೀಡಿ ಚಾಂಡಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಮಾಜಿ ಸಿಎಂ ಒಮ್ಮನ್ ಚಾಂಡಿ ಅವರು ನ್ಯೂಮೋನಿಯಾದಿಂದ ಮುಕ್ತರಾಗಿರುವುದಾಗಿ ವೈದ್ಯರು ತಿಳಿಸಿದ್ದು, ಚಾಂಡಿ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಪಕ್ಷ ನಿರ್ಧರಿಸಿರುವುದಾಗಿ ಹೇಳಿದರು.

ಚಾಂಡಿ ಸ್ವಲ್ಪ ದಣಿದಿದ್ದಾರೆ, ಅವರು ಈಗ ನ್ಯುಮೋನಿಯಾದಿಂದ ಮುಕ್ತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಪಕ್ಷದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಅವರನ್ನು ಭೇಟಿಯಾಗಿದ್ದು, ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು, ಪ್ರಯಾಣ ಮತ್ತು ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಎಐಸಿಸಿ ವ್ಯವಸ್ಥೆ ಮಾಡುತ್ತದೆ ಎಂದು ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.

ಈ ಮಧ್ಯೆ ನ್ಯುಮೋನಿಯಾ ಕಡಿಮೆಯಾಗಿದ್ದು,  ಚಾಂಡಿ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಅವರ ಪುತ್ರ ಚಾಂಡಿ ಉಮ್ಮನ್ ಕೂಡ ಖಚಿತಪಡಿಸಿದ್ದಾರೆ. ತಂದೆಯ ಆರೋಗ್ಯದ ವಿಚಾರದಲ್ಲಿ ಅವರ ಕುಟುಂಬದ ವಿರುದ್ಧ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದೂ ಉಮ್ಮನ್ ಆರೋಪಿಸಿದ್ದಾರೆ.

ತಮ್ಮ ತಂದೆ ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಕುಟುಂಬದ ವಿರುದ್ಧ ಸುಳ್ಳು ಪ್ರಚಾರ ಆಗುತಿತ್ತು.ಯಾವುದೇ ರೀತಿಯ ಚಿಕಿತ್ಸೆಯಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಸುಳ್ಳು ಸುದ್ದಿಗಳನ್ನು ಹರಡುವುದು ಸರಿಯಲ್ಲ. ನಮ್ಮ ಬಳಿ ಎಲ್ಲಾ ವೈದ್ಯಕೀಯ ದಾಖಲೆಗಳಿವೆ ಎಂದು ಉಮ್ಮನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಅರಿತಿದ್ದು, ಉತ್ತಮ ಚಿಕಿತ್ಸೆಗಾಗಿ ಚಾಂಡಿಯನ್ನು ಜರ್ಮನಿಗೆ ಕರೆದೊಯ್ಯಲು ಮುಂದಾಗಿದೆ ಎಂದು ಅವರು ಹೇಳಿದರು.
        
ಇದಕ್ಕೂ ಮುನ್ನ ಚಾಂಡಿ ಅವರ ಆರೋಗ್ಯ ಹದಗೆಟ್ಟ ಬಗ್ಗೆ ವಿವಿಧ ವಲಯಗಳಿಂದ ಕಳವಳ ವ್ಯಕ್ತವಾಗಿತ್ತು. ಹಿರಿಯ ಕಾಂಗ್ರೆಸ್ ನಾಯಕನಿಗೆ ಅವರ ಕುಟುಂಬ ಸದಸ್ಯರಿಂದ ಸರಿಯಾದ ವೈದ್ಯಕೀಯ ಸೇವೆ ನಿರಾಕರಿಸಲಾಗುತ್ತಿದೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರ ಆರೋಗ್ಯದ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ, ಚಾಂಡಿ ತಮ್ಮ ಮಗನ ಫೇಸ್‌ಬುಕ್ ಪೇಜ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಅವರನ್ನು ಕುಟುಂಬ ಮತ್ತು ಪಕ್ಷ ಸರಿಯಾಗಿ ನೋಡಿಕೊಳ್ಳುತ್ತಿದೆ ಎಂದು ಹೇಳಿಕೊಂಡಿದ್ದರು. 2019 ರಿಂದಲೂ ಚಾಂಡಿ ಅವರ ಆರೋಗ್ಯ ಪರಿಸ್ಥಿತಿ ಚೆನ್ನಾಗಿಲ್ಲ. ಗಂಟಲು ಸಂಬಂಧಿತ ಕಾಯಿಲೆ ಉಲ್ಬಣಗೊಂಡ ನಂತರ ಅವರನ್ನು ಕೆಲವು ತಿಂಗಳ ಹಿಂದೆ ಜರ್ಮನಿಗೆ ಕರೆದೊಯ್ಯಲಾಯಿತು. 1970 ರಿಂದ ರಾಜ್ಯ ವಿಧಾನಸಭೆಯಲ್ಲಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಚಾಂಡಿ ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com