ಹೈಡ್ರಾಲಿಕ್ಸ್ ವೈಫಲ್ಯ: ಸಮುದ್ರದಲ್ಲಿ ಇಂಧನ ಸುರಿದು, ತಿರುವನಂತಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಏರ್ ಇಂಡಿಯಾ ವಿಮಾನ

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ತಾಂತ್ರಿಕ ದೋಷದಿಂದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಎಮೆರ್ಜೆನ್ಸಿ ಲ್ಯಾಂಡಿಂಗ್ ಗೂ ಮೊದಲು ವಿಮಾನದ ಪೈಲಟ್ ವಿಮಾನದ ಇಂಧನವನ್ನು ಸಮುದ್ರದಲ್ಲಿ ಸುರಿದಿದ್ದಾರೆ.
ವಿಮಾನ ತುರ್ತು ಭೂಸ್ಪರ್ಶ
ವಿಮಾನ ತುರ್ತು ಭೂಸ್ಪರ್ಶ

ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ತಾಂತ್ರಿಕ ದೋಷದಿಂದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಎಮೆರ್ಜೆನ್ಸಿ ಲ್ಯಾಂಡಿಂಗ್ ಗೂ ಮೊದಲು ವಿಮಾನದ ಪೈಲಟ್ ವಿಮಾನದ ಇಂಧನವನ್ನು ಸಮುದ್ರದಲ್ಲಿ ಸುರಿದಿದ್ದಾರೆ.

ಹೌದು.. ಕೇರಳದ ಕೋಝಿಕ್ಕೋಡ್-ದಮ್ಮಾಮ್ ನಡುವೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಈ ವೇಳೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ಬೆಳಗ್ಗೆ ಟೇಕಾಫ್ ಆಗುತ್ತಿದ್ದ ವೇಳೆ ವಿಮಾನದ ಹಿಂಭಾಗ ರನ್ ವೇಗೆ ಬಡಿದಿರುವ ಶಂಕೆ ವ್ಯಕ್ತವಾಗಿದ್ದು, ಇದೇ ತಾಂತ್ರಿಕ ದೋಷಕ್ಕೆ ಕಾರಣ ಎನ್ನಲಾಗಿದೆ.

ಈ ವಿಮಾನದಲ್ಲಿ ಸುಮಾರು168 ಮಂದಿ ಪ್ರಯಾಣಿಕರು ಸೌದಿಗೆ ಹೋಗುತ್ತಿದ್ದರು. ಕ್ಯಾಲಿಕಟ್‌ನಿಂದ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಹೈಡ್ರಾಲಿಕ್ ವೈಫಲ್ಯದ ಶಂಕೆ ವ್ಯಕ್ತವಾಗಿದೆ. ಇದರ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 385 ಅನ್ನು ತಿರುವನಂತಪುರಂ ಕಡೆಗೆ ತಿರುಗಿಸಲಾಯಿತು. ಅದರಲ್ಲಿ 168 ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಜಾಗ್ರತಾ ಕ್ರಮ: ಆಕಾಶದಿಂದಲೇ ಸಮುದ್ರಕ್ಕೆ ಇಂಧನ ಸುರಿದ ಪೈಲಟ್
ಇನ್ನು ಕ್ಯಾಲಿಕಟ್‌ನಿಂದ ಟೇಕಾಫ್ ಆಗುವ ವೇಳೆ ವಿಮಾನದ ಹಿಂಭಾಗವು ರನ್‌ವೇಗೆ ಅಪ್ಪಳಿಸಿತು. ಇದರಿಂದ ವಿಮಾನದ ಹೈಡ್ರಾಲಿಕ್ಸ್ ವಿಫಲವಾಗಿತ್ತು. ಹೀಗಾಗಿ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ವಿಮಾನದ ಪೈಲಟ್ ತುರ್ತು ಭೂಸ್ಪರ್ಶದ ವೇಳೆ ವಿಮಾನ ರನ್ ವೇ ಅಪ್ಪಳಿಸಿದರೆ ಇದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿಂದಾಗಿ ಆಕಾಶದಿಂದಲೇ ಸಮುದ್ರಕ್ಕೆ ಹೆಚ್ಚುವರಿ ಇಂಧನವನ್ನು ಸುರಿದಿದ್ದಾರೆ. ಬಳಿಕವಷ್ಟೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟ ವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಲ್ಯಾಂಡಿಂಗ್ ವೇಳೆ ಸಂಪೂರ್ಣ ತುರ್ತು ಪರಿಸ್ಥಿತಿ
ಇನ್ನು ವಿಮಾನ ತುರ್ತು ಭೂ ಸ್ಪರ್ಶದ ವೇಳೆ ತಿರುವನಂತಪುರ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಒಂದು ವೇಳೆ ವಿಮಾನ ಅಪಘಾತಕ್ಕೀಡಾದರೆ ತೆಗೆದುಕೊಳ್ಳಬೇಕಾದ ಎಲ್ಲ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಗ್ನಿಶಾಮಕವಾಹನಗಳು, ರಕ್ಷಣಾ ಸಿಬ್ಬಂದಿ ಸರ್ವ ಸನ್ನದ್ದತೆಯಲ್ಲಿ ಕಾರ್ಯಾಚರಣೆಗೆ ಸಿದ್ಧರಾಗಿದ್ದರು. 

ಇಷ್ಟಕ್ಕೂ ಹೈಡ್ರಾಲಿಕ್ಸ್ ವೈಫಲ್ಯ ಎಂದರೇನು?
ವಿಮಾನದ ಲ್ಯಾಂಡಿಂಗ್ ಗೇರ್‌ಗಳು ಇದು ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ವೇಳೆ ಚಕ್ರಗಳನ್ನು ಅಳವಡಿಸುವ ವ್ಯವಸ್ಥೆಯಾಗಿದೆ. ವಿಮಾನದ ಚಕ್ರಗಳು ಹೈಡ್ರಾಲಿಕ್ ಒತ್ತಡದಲ್ಲಿ ಕೆಲಸ ಮಾಡುತ್ತವೆ. ಇದಕ್ಕಾಗಿ, ವಿವಿಧ ಪಿಸ್ಟನ್ಗಳು ಮತ್ತು ಸಿಲಿಂಡರ್ಗಳನ್ನು ಬಳಸಲಾಗುತ್ತದೆ, ಇದು ತೈಲದಿಂದ ತುಂಬಿರುತ್ತದೆ. ಒಂದು ಬದಿಯ ಪಿಸ್ಟನ್‌ನಲ್ಲಿರುವ ತೈಲವನ್ನು ಒತ್ತಡದಿಂದ ಒತ್ತಿದಾಗ, ಇನ್ನೊಂದು ಬದಿಯ ಪಿಸ್ಟನ್‌ನಲ್ಲಿ ಅದೇ ಒತ್ತಡವನ್ನು ತಲುಪುತ್ತದೆ. ಈ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಚಕ್ರಗಳು ಸರಿಯಾಗಿ ತೆರೆಯುವುದಿಲ್ಲ. ಈ ಸ್ಥಿತಿಯು ಅಪಾಯಕಾರಿಯಾಗಬಹುದು. ವಿಮಾನ ಲ್ಯಾಂಡಿಂಗ್ ವೇಳೆ ವಿಮಾನ ರನ್ ವೇ ಅಪ್ಪಳಿಸಿ ಸ್ಫೋಟವಾಗಬಹುದು ಅಥವಾ ವಿಮಾನಕ್ಕೆ ಬೆಂಕಿ ತಗುಲಬಹುದು..

ಪದೇ ಪದೇ ಹೈಡ್ರಾಲಿಕ್ಸ್ ವಿಫಲ
ಇನ್ನು ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರಾಲಿಕ್ಸ್ ವೈಫಲ್ಯ ಇದೇ ಮೊದಲೇನಲ್ಲ.. ಈ ವರ್ಷದ ಜನವರಿ 29 ರಂದು ಏರ್ ಇಂಡಿಯಾ ವಿಮಾನ IX 412 ಹೈಡ್ರಾಲಿಕ್ ವೈಫಲ್ಯವನ್ನು ಹೊಂದಿತ್ತು. ವಿಮಾನವು ಶಾರ್ಜಾದಿಂದ ಕೊಚ್ಚಿಗೆ ಹೋಗುತ್ತಿತ್ತು. ಇದರಲ್ಲಿ 183 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು. ಈ ಸಂದರ್ಭದಲ್ಲಿಯೂ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನದ ಲ್ಯಾಂಡಿಂಗ್‌ಗೆ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಯಿತು. ಇದಾದ ಬಳಿಕ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿತ್ತು.
 
3:30 ಕ್ಕೆ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರ ರವಾನೆ
ಇನ್ನು ಶುಕ್ರವಾರ ಮಧ್ಯಾಹ್ನ 12:15ಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ. ವಿಮಾನದಲ್ಲಿ 168 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರು ಮಧ್ಯಾಹ್ನ 3.30ಕ್ಕೆ ಮತ್ತೊಂದು ವಿಮಾನದ ಮೂಲಕ ಸೌದಿಯಲ್ಲಿರುವ ದಮಾಮ್‌ಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com