ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಉರುಳಿದ ಟ್ರಕ್, 4 ವರ್ಷದ ಬಾಲಕ ಸೇರಿ ನಾಲ್ವರು ಸಾವು

ಶನಿವಾರ ಮುಂಜಾನೆ ಮಧ್ಯ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ಎಂಸಿಡಿ ಟ್ರಕ್ ಪಲ್ಟಿಯಾಗಿ ನಾಲ್ಕು ವರ್ಷದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವದೆಹಲಿ: ಶನಿವಾರ ಮುಂಜಾನೆ ಮಧ್ಯ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ಎಂಸಿಡಿ ಟ್ರಕ್ ಪಲ್ಟಿಯಾಗಿ ನಾಲ್ಕು ವರ್ಷದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದ್ ಪರ್ಬತ್‌ನ ರಸ್ತೆ ಸಂಖ್ಯೆ 10ರಲ್ಲಿ ಟ್ರಕ್ ಪಲ್ಟಿಯಾಗಿದೆ ಎಂದು ಪೊಲೀಸರಿಗೆ ಮುಂಜಾನೆ 1.30ರ ಸುಮಾರಿಗೆ ಮಾಹಿತಿ ಲಭ್ಯವಾಗಿದೆ. ಕಾರ್ಮಿಕರು ಸೇರಿದಂತೆ ಕೆಲವು ಜನರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಗೆ ಸೇರಿದ ಟ್ರಕ್ ಅನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಯಿತು. ಸ್ಥಳದಲ್ಲೇ ಮೃತಪಟ್ಟಿರುವ ಮೂವರ ಮೃತದೇಹಗಳು ಮತ್ತು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಹೊರತೆಗೆಯಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಸಂಜಯ್ ಕುಮಾರ್ ಸೇನ್ ತಿಳಿಸಿದ್ದಾರೆ.

ಗಾಯಾಳು ಕಿಲ್ಲು (40) ಅವರನ್ನು ಸಮೀಪದ ಜೀವನ್ ಮಾಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಕಿಲ್ಲು ಅವರ ಪುತ್ರ ಅನುಜ್ (4), ರಮೇಶ್ (30) ಮತ್ತು ಸೋನಮ್ (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಧ್ಯಪ್ರದೇಶದ ಟಿಕಮ್‌ಗಢ್‌ನವರು. ಅಪಘಾತ ಸಂಭವಿಸಿದಾಗ ಬಾಲಕ ಆ ಪ್ರದೇಶದಲ್ಲಿ ಆಟವಾಡುತ್ತಿದ್ದನು ಎಂದು ಡಿಸಿಪಿ ಹೇಳಿದ್ದಾರೆ.

ವೇಗವಾಗಿ ಬಂದ ಟ್ರಕ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಟ್ರಕ್ ಚಾಲಕ ಇನ್ನೂ ಪತ್ತೆ ಮಾಡಲಾಗಿಲ್ಲ, ಮೃತದೇಹಗಳನ್ನು ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಕಾರ್ಮಿಕ ಮೋತಿ (40) ಅವರ ಹೇಳಿಕೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com