ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ಸಚಿವಾಲಯ ಪರಾಮರ್ಶೆ: ಬಿಎಫ್.7 ಹೊಸ ರೂಪಾಂತರಿ ಪತ್ತೆ ಮೇಲೆ ಗಮನ

ದೇಶದಲ್ಲಿನ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರವು ನಿನ್ನೆ ಉನ್ನತ ಮಟ್ಟದ ಸಭೆಯನ್ನು ನಡೆಸಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿನ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರವು ನಿನ್ನೆ ಉನ್ನತ ಮಟ್ಟದ ಸಭೆಯನ್ನು ನಡೆಸಿತು.

ಸಾಂಕ್ರಾಮಿಕ ರೋಗಕ್ಕೆ ಯಾವ ರೀತಿ ಸಿದ್ಧತೆ ನಡೆಸಬೇಕು ಮತ್ತು ಪರಿಣಾಮಕಾರಿ ನಿರ್ವಹಣೆಯನ್ನು ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಎಂದು ಸಭೆಯಲ್ಲಿ ಪರಿಶೀಲಿಸಲಾಯಿತು.

ಚೀನಾ ಮತ್ತು ಇತರ ಪೂರ್ವ ಏಷ್ಯಾದ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣದ ಹಿನ್ನೆಲೆಯಲ್ಲಿ, ಪ್ರಧಾನಿ ಕಳೆದ ವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದರು. ಇದರಲ್ಲಿ ಅವರು ಜಾಗರೂಕತೆ ಮತ್ತು ಕಣ್ಗಾವಲು ಹೆಚ್ಚಿಸಲು, ಕೋವಿಡ್ ಪರೀಕ್ಷೆ ಮತ್ತು ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ನಿರ್ದೇಶಿಸಿದರು.

ಡಿಸೆಂಬರ್‌ನಲ್ಲಿ ಸಂಗ್ರಹಿಸಲಾದ ಸುಮಾರು 500 ಮಾದರಿಗಳ ಜೀನೋಮ್ ಅನುಕ್ರಮವನ್ನು ದೇಶಾದ್ಯಂತ INSACOG ಲ್ಯಾಬ್‌ಗಳಲ್ಲಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ, ಚೀನಾದಲ್ಲಿ ಉಲ್ಬಣಗೊಳ್ಳುತ್ತಿರುವ BF.7 ಕೊರೋನಾ ರೂಪಾಂತರಿ ಸೇರಿದಂತೆ ಹೊಸ ರೂಪಾಂತರಿಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ, ಪ್ರಧಾನ ಮಂತ್ರಿಯವರ ನಿರ್ದೇಶನಗಳ ಪ್ರಕಾರ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ (WGS)ನ್ನು ಬಲಪಡಿಸುವುದು ಮತ್ತು ದೇಶಾದ್ಯಂತ ಹೆಚ್ಚು ಗಮನಾರ್ಹ ಸಂಖ್ಯೆಯ ಮಾದರಿಗಳನ್ನು INSACOG ನೆಟ್‌ವರ್ಕ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಲಾಯಿತು.

1,716 ಅಂತಾರಾಷ್ಟ್ರೀಯ ವಿಮಾನಗಳನ್ನು ಪರೀಕ್ಷಿಸಲಾಗಿದೆ. ಕೋವಿಡ್ -19 ಪರೀಕ್ಷೆಗಾಗಿ 5,666 ಮಾದರಿಗಳನ್ನು ಸಂಗ್ರಹಿಸಲಾಗಿದೆ. ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಕೊರೋನಾ ಪರೀಕ್ಷೆಗಳನ್ನು ಶೇಕಡಾ ಎರಡರಷ್ಟು ಯಾದೃಚ್ಛಿಕ ಪರೀಕ್ಷೆಯಲ್ಲಿ ಸುಮಾರು 53 ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ -19 ಪರೀಕ್ಷೆ ನಡೆಸಿದರು.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್, ಬ್ರೆಜಿಲ್ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ ಉಲ್ಬಣಗೊಳ್ಳುವುದರೊಂದಿಗೆ ಸಾಂಕ್ರಾಮಿಕ ರೋಗದ ವಿಕಸನಗೊಳ್ಳುತ್ತಿರುವ ಜಾಗತಿಕ ಸನ್ನಿವೇಶದ ಬಗ್ಗೆ ಮಿಶ್ರಾ ಅವರಿಗೆ ತಿಳಿಸಲಾಗಿದೆ.

ಚೀನಾ, ಥೈಲ್ಯಾಂಡ್, ಜಪಾನ್, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ದಕ್ಷಿಣ ಕೊರಿಯಾದ ಪ್ರಯಾಣಿಕರಿಗೆ ಜನವರಿ 1 ರಿಂದ ಆರ್‌ಟಿ-ಪಿಸಿಆರ್ ವರದಿಯ ಅಗತ್ಯವಿದೆ ಎಂದು ಭಾರತ ಈಗಾಗಲೇ ಘೋಷಿಸಿದೆ. ಅವರು ಏರ್ ಸುವಿಧಾದಲ್ಲಿ ಕೋವಿಡ್ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು. ಪ್ರಯಾಣಕ್ಕೆ ತೆರಳುವ 72 ಗಂಟೆ ಮೊದಲು ಕೊರೋನಾ ಪರೀಕ್ಷೆ ನಡೆಸಬೇಕೆಂದು ತಿಳಿಸಲಾಗಿದೆ. 

ಸಭೆಯಲ್ಲಿ, ಕೋವಿಡ್-ಸೂಕ್ತ ನಡವಳಿಕೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು, ಕಣ್ಗಾವಲು ಬಲಪಡಿಸುವುದು, ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸುವುದು ಮತ್ತು ಕೊರೋನವೈರಸ್ ಮುನ್ನೆಚ್ಚರಿಕೆಯ ಪ್ರಮಾಣಗಳನ್ನು ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರಧಾನ ಮಂತ್ರಿಯವರ ನಿರ್ದೇಶನದ ಪ್ರಕಾರ, ಡಿಸೆಂಬರ್ 27 ರಂದು ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಣಕು ಡ್ರಿಲ್ ಗಳನ್ನು ನಡೆಸಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಮ್ಲಜನಕ ಸ್ಥಾವರಗಳು, ವೆಂಟಿಲೇಟರ್‌ಗಳು, ಲಾಜಿಸ್ಟಿಕ್ಸ್ ಮತ್ತು ಮಾನವ ಸಂಪನ್ಮೂಲಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವುದರೊಂದಿಗೆ ಕೋವಿಡ್-ಮೀಸಲಾದ ಸೌಲಭ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. 

21,097 ಸೌಲಭ್ಯಗಳು ಮಾಕ್ ಡ್ರಿಲ್ ನಡೆಸಿದ್ದು, ಅದರಲ್ಲಿ 16,108 ಸರ್ಕಾರಿ ಸೌಲಭ್ಯಗಳಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಾಕಷ್ಟು ದಾಸ್ತಾನು ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಫಾರ್ಮಾ ಕಂಪನಿಗಳೊಂದಿಗೆ ಪ್ರತ್ಯೇಕ ಪರಿಶೀಲನಾ ಸಭೆಗಳನ್ನು ನಡೆಸಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೇಂದ್ರದ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅಣಕು ಡ್ರಿಲ್ ನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದಾರೆ. ಅವರು ಡಿಸೆಂಬರ್ 23 ರಂದು ಕೋವಿಡ್ -19 ಕುರಿತು ರಾಜ್ಯ ಆರೋಗ್ಯ ಮಂತ್ರಿಗಳೊಂದಿಗೆ ವರ್ಚುವಲ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶನಗಳ ಪ್ರಕಾರ, ಚೀನಾಕ್ಕೆ ಔಷಧೀಯ ಉತ್ಪನ್ನಗಳು ಮತ್ತು ಸಲಕರಣೆಗಳ ರಫ್ತುಗಳನ್ನು ಮೇಲ್ವಿಚಾರಣೆ ಮಾಡಲು ವಾಣಿಜ್ಯ ಸಚಿವಾಲಯವನ್ನು ಕೇಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com