ರಸ್ತೆ ಗುಂಡಿಯಿಂದ ರಿಷಬ್ ಪಂತ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ: ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ

ಶುಕ್ರವಾರದಂದು ಮಾರಣಾಂತಿಕ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರ ಆರೋಗ್ಯ ಸ್ಥಿತಿ ನಿರಂತರವಾಗಿ ಸುಧಾರಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಡೆಹ್ರಾಡೂನ್: ಶುಕ್ರವಾರದಂದು ಮಾರಣಾಂತಿಕ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರ ಆರೋಗ್ಯ ಸ್ಥಿತಿ ನಿರಂತರವಾಗಿ ಸುಧಾರಿಸುತ್ತಿದೆ.

ಶುಕ್ರವಾರದಂದು ಪಂತ್ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಎಸ್‌ಯುವಿಯು ದೆಹಲಿಯಿಂದ ತನ್ನ ಹುಟ್ಟೂರಾದ ರೂರ್ಕಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ಪವಾಡದ ರೀತಿಯಲ್ಲಿ ಪಂತ್ ಅಪಾಯದಿಂದ ಪಾರಾಗಿದ್ದರು.

ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾನುವಾರ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್ ಅವರನ್ನು ಭೇಟಿ ಮಾಡಿದರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದರು. ಅಗತ್ಯವಿದ್ದಲ್ಲಿ ಅವರನ್ನು ಉನ್ನತ ಸೌಲಭ್ಯಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಧಾಮಿ, 'ಪಂತ್ ಅವರ ಆರೋಗ್ಯವು ಅತ್ಯಂತ ವೇಗವಾಗಿ ಸುಧಾರಿಸುತ್ತಿದೆ. ವೈದ್ಯರು ಮತ್ತು ಬಿಸಿಸಿಐ ತಂಡವು ಪರಸ್ಪರ ಸಂಪರ್ಕದಲ್ಲಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಪಂತ್ ಅವರ ಆರೋಗ್ಯವು ಮತ್ತಷ್ಟು ಸುಧಾರಿಸುತ್ತದೆ ಎಂದು ವೈದ್ಯರು ನನಗೆ ತಿಳಿಸಿದ್ದಾರೆ. ಪಂತ್ ಅವರ ಕುಟುಂಬ ಸದಸ್ಯರು ಈಗ ಲಭ್ಯವಾಗುತ್ತಿರುವ ಚಿಕಿತ್ಸೆಯಿಂದ ತೃಪ್ತರಾಗಿದ್ದಾರೆ' ಎಂದು ಹೇಳಿದರು.

ಈಮಧ್ಯೆ, ರಿಷಬ್ ಸಹೋದರಿ ಸಾಕ್ಷಿ ತನ್ನ ಸೋದರನ ಆರೋಗ್ಯ ಸ್ಥಿತಿಯ ವಿಚಾರಣೆಗಾಗಿ ಲಂಡನ್‌ನಿಂದ ಡೆಹ್ರಾಡೂನ್ ತಲುಪಿದ್ದಾರೆ. ಅಪಘಾತದ ಸುದ್ದಿಯ ನಂತರ ತಾನು ತುಂಬಾ ನರ್ವಸ್ ಆಗಿದ್ದೇನೆ ಮತ್ತು ತನ್ನ ಸಹೋದರನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದರೂ ತೃಪ್ತಿಯಾಗಲಿಲ್ಲ ಎಂದು ಸಾಕ್ಷಿ ಹೇಳಿದ್ದಾರೆ.

ಸಾಕ್ಷಿ ರಾತ್ರಿಯಿಡೀ ಕುಟುಂಬದಿಂದ ತನ್ನ ಸಹೋದರನ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದರು. ಆತನನ್ನು ಭೇಟಿಯಾದ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪಂತ್ ಅವರ ಚಿಕ್ಕಮ್ಮ ಸುನೀತಾ ಜೋಶಿ ಕೂಡ ಲಖನೌ‌ನಿಂದ ಆಸ್ಪತ್ರೆಗೆ ತಲುಪಿದ್ದಾರೆ. 'ರಿಷಭ್ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳದಿರಲು ಬೆಳಗ್ಗೆ ಬೇಗನೆ ಕಾರಿನಲ್ಲಿ ಹೊರಟರು. ಹೊಸ ವರ್ಷವನ್ನು ತನ್ನ ಕುಟುಂಬದೊಂದಿಗೆ ಆಚರಿಸಲು ಅವರು ಬಯಸಿದ್ದರು' ಎಂದಿದ್ದಾರೆ.

ಮೂಲಗಳ ಪ್ರಕಾರ, ಹಣೆಯ ಗಾಯದ ನಂತರ ಮ್ಯಾಕ್ಸ್‌ನಲ್ಲಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಪಂತ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಧಾಮಿ ಮಾತನಾಡಿ, ರಸ್ತೆಯಲ್ಲಿನ ಗುಂಡಿಯಿಂದಾಗಿ ಅಪಘಾತ ಸಂಭವಿಸಿದೆ. ಪಂತ್ ಅವರನ್ನು ರಕ್ಷಿಸಿದ ಎಲ್ಲರಿಗೂ ಧನ್ಯವಾದಗಳು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿಯೇ ಇರುತ್ತಾರೆ ಎಂದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಿಷಭ್ ಅವರ ತಾಯಿ ಸರೋಜ್ ಪಂತ್ ಅವರೊಂದಿಗೆ ಮಾತನಾಡಿದ್ದು, ಉತ್ತಮ ಚಿಕಿತ್ಸೆ ನೀಡುವಂತೆ ಉತ್ತರಾಖಂಡ ಸರ್ಕಾರಕ್ಕೆ ಸೂಚಿಸಿದ್ದಾರೆ. ಬಿಸಿಸಿಐ ಪ್ರತಿನಿಧಿಗಳ ತಂಡವೂ ಪಂತ್ ಅವರ ಚಿಕಿತ್ಸೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com