

ಸಂಗಾ ರೆಡ್ಡಿ: ಗುಮ್ಮಡಿಲ ಕೈಗಾರಿಕಾ ಪ್ರದೇಶದ ಮೈಲನ್ ಕೆಮಿಕಲ್ ಇಂಡಸ್ಟ್ರಿಯಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತರನ್ನು ಪಶ್ಚಿಮ ಬಂಗಾಳದ ಪರಿತೋಷ್ ಮೆಹ್ತಾ (46), ಬಿಹಾರದ ರಂಜಿತ್ ಕುಮಾರ್ (27) ಮತ್ತು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸಹಾಯಕ ವ್ಯವಸ್ಥಾಪಕ ಲೋಕೇಶ್ವರ್ ರಾವ್ (38) ಎಂದು ಗುರುತಿಸಲಾಗಿದೆ.
ಘಟನೆ ನಡೆದಾಗ ಬೆಳಗ್ಗೆ 11.40ರ ಸುಮಾರಿಗೆ ಒಂದು ಡ್ರಮ್ನಿಂದ ಮತ್ತೊಂದು ಡ್ರಮ್ಗೆ 1,1,3,3 ಟೆಟ್ರಾ-ಮೀಥೈಲ್ ಡಿಸಿಲೋಕ್ಸೇನ್ ಅನ್ನು ಸುರಿಯುತ್ತಿದ್ದರು. ಈ ವೇಳೆ ಮೂವರಿಗೂ ಶೇ 90ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಬೊಲ್ಲಾರಂ ಸರ್ಕಲ್ ಇನ್ಸ್ಪೆಕ್ಟರ್ (ಸಿಐ) ಕೆ ಸುರೇಂದರ್ ರೆಡ್ಡಿ ತಿಳಿಸಿದ್ದಾರೆ.
ಘಟಕದಲ್ಲಿದ್ದ ಇತರ ಕಾರ್ಮಿಕರು ಬೆಂಕಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೂವರನ್ನು ಹೈದರಾಬಾದ್ನ ಸೋಮಾಜಿಗುಡಾದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಸಿಐ ತಿಳಿಸಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತರ ಸಂಬಂಧಿಕರಿಗೆ ಅವರ ನಿಧನದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸುರೇಂದರ್ ರೆಡ್ಡಿ ತಿಳಿಸಿದ್ದಾರೆ.
Advertisement