'ನಾನು ಯಾವಾಗ ಮದುವೆಯಾಗುತ್ತೇನೆ ಎಂದರೆ....': ವಿವಾಹ, ಹುಡುಗಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕಾಂಗ್ರೆಸ್ ನಾಯಕ 52 ವರ್ಷದ ರಾಹುಲ್ ಗಾಂಧಿಯವರ ಸಾರ್ವಜನಿಕ ಬದುಕಿನಲ್ಲಿ ಅವರಿಗೆ ಪದೇ ಪದೇ 'ನೀವು ಯಾವಾಗ ಮದುವೆಯಾಗುತ್ತೀರಿ' ಎಂಬ ಪ್ರಶ್ನೆಗಳು ತೂರಿಬರುವುದುಂಟು.
ರಾಹುಲ್ ಗಾಂಧಿ-ಕಾಮಿಯಾ ಜಾನಿ
ರಾಹುಲ್ ಗಾಂಧಿ-ಕಾಮಿಯಾ ಜಾನಿ

ನವದೆಹಲಿ: ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕಾಂಗ್ರೆಸ್ ನಾಯಕ 52 ವರ್ಷದ ರಾಹುಲ್ ಗಾಂಧಿಯವರ ಸಾರ್ವಜನಿಕ ಬದುಕಿನಲ್ಲಿ ಅವರಿಗೆ ಪದೇ ಪದೇ 'ನೀವು ಯಾವಾಗ ಮದುವೆಯಾಗುತ್ತೀರಿ' ಎಂಬ ಪ್ರಶ್ನೆಗಳು ತೂರಿಬರುವುದುಂಟು.

ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಅಂತಿಮ ಹಂತಕ್ಕೆ ಬಂದು ತಲುಪಿದ್ದು ಇದೇ 30ರಂದು ಜಮ್ಮು-ಕಾಶ್ಮೀರದಲ್ಲಿ ಸಮಾರೋಪ ಏರ್ಪಡಲಿದೆ. ಈ ಮಧ್ಯೆ ನಿನ್ನೆ ಯಾತ್ರೆಯ ಮಧ್ಯೆ ಫುಡ್ ಬ್ಲಾಗರ್,ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನೆಲ್ ನ ಸಂಪಾದಕಿ ಕಾಮಿಯಾ ಜಾನಿ ಜೊತೆ ಸಂಡೆ ಬ್ರಂಚ್ ನಲ್ಲಿ ಭಾಗಿಯಾಗಿದ್ದರು. 

ಅದರಲ್ಲಿ ಸಹಜವಾಗಿ ಮಾತನಾಡುತ್ತಾ ಕಾಮಿಯಾ ರಾಹುಲ್ ಗಾಂಧಿಯವರಲ್ಲಿ ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದ್ದಾರೆ, ಅದಕ್ಕೆ ರಾಹುಲ್ ಗಾಂಧಿ ಸೂಕ್ತ ಹುಡುಗಿ ಸಿಕ್ಕಿದಾಗ ಎಂದು ಹೇಳಿದ್ದಾರೆ. 

ಅವರು ನೀಡಿದ ಸಂದರ್ಶನದ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಮಿಯಾ ಅವರು ನೀವು ಸದ್ಯದಲ್ಲಿ ಮದುವೆಯಾಗುವ ಆಲೋಚನೆ ಹೊಂದಿದ್ದೀರಾ, ನಿಮಗೆ ಮದುವೆಯಾಗುವ ಆಲೋಚನೆ ಇಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ, ಸೂಕ್ತ ಹುಡುಗಿ ಸಿಕ್ಕಿದಾಗ ಖಂಡಿತಾ ನಾನು ಮದುವೆಯಾಗುತ್ತೇನೆ ಎಂದರು, ಕೂಡಲೇ ಸಂದರ್ಶಕಿ ಅಂತವರು ಯಾರಾದರೂ ಸಿಕ್ಕಿದ್ದಾರೆಯೇ, ಎಂತಹ ಹುಡುಗಿ ನಿಮಗೆ ಸಿಗಬೇಕು, ಅರ್ಹತೆಗಳೇನಿರಬೇಕು ಎಂದು ಕೇಳಿದಾಗ, ಹಾಗೇನಿಲ್ಲ, ಪ್ರೀತಿಸುವ ಹುಡುಗಿಯಾಗಿದ್ದು, ಆಕೆ ಬುದ್ಧಿವಂತಳಾಗಿದ್ದರೆ ಸಾಕು ಎಂದಿದ್ದಾರೆ.

ಓ ಈಗ ರಾಹುಲ್ ಗಾಂಧಿಯವರ ಕಡೆಯಿಂದ ಹುಡುಗಿಯರಿಗೆ ಮೆಸೇಜ್ ಹೋಗಿರುತ್ತದೆ ಎಂದು ಕಾಮಿಯಾ ಹೇಳಿದಾಗ ನಕ್ಕ ರಾಹುಲ್ ಗಾಂಧಿ ನೀವೀಗ ನನ್ನನ್ನು ತೊಂದರೆಗೆ ಸಿಲುಕಿ ಹಾಕಿಸುತ್ತಿದ್ದೀರಿ ಎಂದಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ರಾಹುಲ್ ಗಾಂಧಿಯವರು ಆಗಲೂ ಮದುವೆ ಬಗ್ಗೆ ಮಾತನಾಡಿದ್ದರು, ನನ್ನ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿಯವರ ಗುಣ ಹೊಂದಿರುವ ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ ಎಂದಿದ್ದರು.

ರಾಹುಲ್ ಗಾಂಧಿಯವರು ಕೇವಲ ಕಾಂಗ್ರೆಸ್ ಸಂಸದ ಮಾತ್ರವಲ್ಲ ದೇಶದ ಬಹುದೊಡ್ಡ ರಾಜಕೀಯ ಕುಟುಂಬ ಹಿನ್ನೆಲೆಯಿಂದ ಬಂದವರು. ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಅವರ ಕುಟುಂಬ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುತ್ತವೆ. ನೆಗೆಟಿವ್ ಕಮೆಂಟ್ ಗಳು ಬರುತ್ತವೆ, ಟ್ರೋಲ್ ಆಗುತ್ತಿರುತ್ತಾರೆ. ಇವುಗಳನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರಿ ಮತ್ತು ನಿಭಾಯಿಸುತ್ತೀರಿ ಎಂದು ಕೇಳಿದಾಗ ಟ್ರೋಲ್ ಗಳನ್ನು ಗಿಫ್ಟ್ ಎಂದು ಪರಿಗಣಿಸುತ್ತೇನೆ. ಗಿಫ್ಟ್ ಗಳನ್ನು ಸ್ವೀಕರಿಸುವುದು, ಬಿಡುವುದು ನಮ್ಮ ನಮ್ಮ ಇಚ್ಛೆ. ಅದೇ ರೀತಿ ಟ್ರೋಲ್ ಗಳನ್ನು ಇಷ್ಟವಿದ್ದರೆ ಸ್ವೀಕರಿಸುತ್ತೇನೆ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳದೆ ಬಿಟ್ಟುಬಿಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com