19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಮಾದಕ ವಸ್ತು ನೀಡಿ ಅತ್ಯಾಚಾರ, ಆರೋಪಿ ಬಂಧನಕ್ಕೆ ಪೊಲೀಸರ ಹುಡುಕಾಟ
19 ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯೊಬ್ಬಳಿಗೆ ಮಾದಕ ವಸ್ತು ನೀಡಿ, ಅತ್ಯಾಚಾರ ಎಸಗಿ, ತಾಮರಸ್ಸೆರಿ ಘಾಟ್ ರಸ್ತೆಯ ಬದಿಯಲ್ಲಿ ಇಳಿಸಿರುವ ಘಟನೆ ನಡೆದಿದೆ. ತಾಮರಸ್ಸೆರಿ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 02nd June 2023 01:26 PM | Last Updated: 02nd June 2023 01:26 PM | A+A A-

ಸಾಂದರ್ಭಿಕ ಚಿತ್ರ
ಕೋಯಿಕ್ಕೋಡ್: 19 ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯೊಬ್ಬಳಿಗೆ ಮಾದಕ ವಸ್ತು ನೀಡಿ, ಅತ್ಯಾಚಾರ ಎಸಗಿ, ತಾಮರಸ್ಸೆರಿ ಘಾಟ್ ರಸ್ತೆಯ ಬದಿಯಲ್ಲಿ ಇಳಿಸಿರುವ ಘಟನೆ ನಡೆದಿದೆ. ತಾಮರಸ್ಸೆರಿ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಯಿಕ್ಕೋಡ್‌ನ ಕೈತಪೊಯಿಲ್‌ನಲ್ಲಿರುವ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಯುವತಿ ಮಂಗಳವಾರ ನಾಪತ್ತೆಯಾಗಿದ್ದಳು. ಕಾಲೇಜು ಬಳಿ ಪೇಯಿಂಗ್ ಗೆಸ್ಟ್ ಆಗಿ ಆಕೆ ಉಳಿದುಕೊಂಡಿದ್ದಳು.
ಮಂಗಳವಾರ ಕಾಲೇಜಿಗೆ ಗೈರುಹಾಜರಾದ ಬಗ್ಗೆ ಕಾಲೇಜು ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಯವರಿಗೆ ಮಾಹಿತಿ ನೀಡಿದ್ದು, ಯುವತಿಯ ಪೋಷಕರ ದೂರಿನಂತೆ ತಾಮರಸ್ಸೆರಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ತಾಮರಸ್ಸೆರಿ ಘಾಟ್ ರಸ್ತೆಯ 9ನೇ ತಿರುವಿನಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಆಕೆಯನ್ನು ತಾಮರಸ್ಸೆರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ತಪಾಸಣೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.
ವಿದ್ಯಾರ್ಥಿನಿಯ ಹೇಳಿಕೆಯಂತೆ, ವಯನಾಡ್ ಮೂಲದ ವ್ಯಕ್ತಿಯೊಬ್ಬ ಆಕೆಗೆ ಮಾದಕ ದ್ರವ್ಯ ನೀಡಿ ಎರ್ನಾಕುಲಂ ಮತ್ತು ವಯನಾಡಿನ ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಘಾಟ್ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ.
ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಾಮರಸ್ಸೆರಿ ಡಿವೈಎಸ್ಪಿ ಅಶ್ರಫ್ ತಂಗಲಕ್ಕಂಡಿಯಿಲ್ ತಿಳಿಸಿದ್ದಾರೆ.