ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲಾಗುವುದು, ಪೊಲೀಸರಿಂದ ಶೀಘ್ರವೇ ಚಾರ್ಜ್ ಶೀಟ್ ಸಲ್ಲಿಕೆ: ಅನುರಾಗ್ ಠಾಕೂರ್

ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ, ಪೊಲೀಸರು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ.
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಲೈಂಗಿಕ ದುರ್ವರ್ತನೆ ಆರೋಪದ ಮೇಲೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇಶದ ಅಗ್ರ ಕುಸ್ತಿಪಟುಗಳ ನಿರಂತರ ಪ್ರತಿಭಟನೆಯ ನಡುವೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ, ಪೊಲೀಸರು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ.

ಇಲ್ಲಿ ನಡೆದ ಎಕನಾಮಿಕ್ ಸಮಾವೇಶದಲ್ಲಿ ಮಾತನಾಡಿದ ಠಾಕೂರ್, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.

ದಿನನಿತ್ಯದ ವ್ಯವಹಾರಗಳನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ರಚಿಸಿರುವ ನಿರ್ವಾಹಕರ ಸಮಿತಿಯು ನೋಡಿಕೊಳ್ಳುತ್ತಿರುವುದರಿಂದ ಡಬ್ಲ್ಯುಎಫ್‌ಐ ತನ್ನ ಯಾವುದೇ ದಿನನಿತ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ. ಸದ್ಯದಲ್ಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗಲಿದೆ ಎಂದರು.

ಸೂಕ್ತ ಸಮಯದಲ್ಲಿ ನ್ಯಾಯ ಸಿಗಲಿದೆ. ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಅಪರಾಧಕ್ಕೆ ತ್ವರಿತ ನ್ಯಾಯ ಸಿಗಬೇಕು ಎಂದು ಸಚಿವರು ಹೇಳಿದರು.

ಠಾಕೂರ್ ಅವರು ಜನವರಿಯಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಆಲಿಸಿದ್ದರು ಮತ್ತು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದರು.

ನಾವು ಕುಸ್ತಿಪಟುಗಳು ಶಿಫಾರಸು ಮಾಡಿದ ಸದಸ್ಯರನ್ನೂ ಸೇರಿಸಿದ್ದೇವೆ ಮತ್ತು ತನಿಖೆಯನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನಾವು ಎಲ್ಲಾ ಹಂತಗಳಲ್ಲಿ ಕುಸ್ತಿಪಟುಗಳ ಮಾತನ್ನು ಕೇಳಿದ್ದೇವೆ ಮತ್ತು ಅವರು ಕೇಳಿದ್ದನ್ನೆಲ್ಲಾ ಮಾಡಿದ್ದೇವೆ. ಪೊಲೀಸ್ ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಜನರು ಕಾಯಬೇಕು ಎಂದರು.

'ಕುಸ್ತಿಪಟುಗಳು 38 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರಿಗೆ ನ್ಯಾಯ ಸಿಗಬೇಕೆಂದು ನಾವು ಬಯಸಿದ್ದರಿಂದ ನಮಗೆ ಅದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ನಾವು ಯಾರ ಪರ ವಹಿಸಲು ಬಯಸುವುದಿಲ್ಲ ಮತ್ತು ಸತ್ಯಕ್ಕಾಗಿ ಕಾಯಬೇಕು' ಎಂದು ಠಾಕೂರ್ ಹೇಳಿದರು.

'ತನಿಖೆ ನಡೆಯುತ್ತಿದೆ, ಅದು ಮುಗಿಯಲಿ. ನಾವು ಯಾವುದೇ ವ್ಯಕ್ತಿ ಅಥವಾ ಯಾರ ಪರವಾಗಿರಲು ಬಯಸುವುದಿಲ್ಲ. ಕುಸ್ತಿಪಟುಗಳಿಗೆ ನ್ಯಾಯ ಸಿಗುವಂತೆ ಮಾಡಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ, ಅದು ತನಿಖೆ ಪೂರ್ಣಗೊಂಡಾಗ ಮಾತ್ರ ಸಂಭವಿಸುತ್ತದೆ. ಅಲ್ಲಿಯವರೆಗೆ ಕಾಯೋಣ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com