ಜೈಲು ಪಾಲಾಗಿರುವ ಮನೀಶ್ ಸಿಸೋಡಿಯಾ ಬಗ್ಗೆ ಅರವಿಂದ್ ಕೇಜ್ರಿವಾಲ್ ಭಾವುಕ ಮಾತು!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಬವಾನಾದಲ್ಲಿ ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಸ್ಪೆಶಲೈಸ್ಡ್ ಎಕ್ಸಲೆನ್ಸ್‌ನ ಹೊಸ ಶಾಖೆಯನ್ನು ಉದ್ಘಾಟಿಸುವಾಗ ತಮ್ಮ ಸಂಪುಟದ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೆನಪಿಸಿಕೊಂಡು ಭಾವುಕರಾದರು.
Published: 07th June 2023 03:14 PM | Last Updated: 07th June 2023 07:46 PM | A+A A-

ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಬವಾನಾದಲ್ಲಿ ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಸ್ಪೆಶಲೈಸ್ಡ್ ಎಕ್ಸಲೆನ್ಸ್‌ನ ಹೊಸ ಶಾಖೆಯನ್ನು ಉದ್ಘಾಟಿಸುವಾಗ ತಮ್ಮ ಸಂಪುಟದ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೆನಪಿಸಿಕೊಂಡು ಭಾವುಕರಾದರು.
'ನಾನಿಂದು ಮನೀಶ್ ಸಿಸೋಡಿಯಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಮನೀಶ್ ಸಿಸೋಡಿಯಾ ಇದನ್ನು ಆರಂಭಿಸಿದ್ದರು. ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಅನ್ಯಾಯದ ರೀತಿಯಲ್ಲಿ ಜೈಲಿಗಟ್ಟಿದರು' ಎಂದು ಕೇಜ್ರಿವಾಲ್ ಹೇಳಿದ್ದಾರೆ.
'ಸುಳ್ಳು ಆರೋಪಗಳ' ಮೇಲೆ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಲಾಗಿದೆ ಮತ್ತು ಅವರಿಗೆ 'ಶೀಘ್ರದಲ್ಲೇ' ಜಾಮೀನು ನೀಡಲಾಗುವುದು. ಮನೀಶ್ ಸಿಸೋಡಿಯಾ ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತಾರೆ ಎಂದು ನನಗೆ ಖಾತ್ರಿಯಿದೆ. ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದಿದ್ದಾರೆ.
ಅವರು ಉತ್ತಮ ಶಾಲೆಗಳನ್ನು ನಿರ್ಮಿಸುತ್ತಿದ್ದರು. ಆಮ್ ಆದ್ಮಿ ಪಕ್ಷವು ಜನಪ್ರಿಯವಾಗುತ್ತಿರುವ ಕಾರಣ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ಎಎಪಿ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಸಿಸೋಡಿಯಾಗಿಲ್ಲ ಜಾಮೀನು, ಆದರೆ ಅನಾರೋಗ್ಯ ಪೀಡಿತ ಪತ್ನಿ ಭೇಟಿಗೆ ಹೈಕೋರ್ಟ್ ಅಸ್ತು
ಬಿಜೆಪಿ ವಿರುದ್ಧ ಕಿಡಿಕಾರಿದ ಕೇಜ್ರಿವಾಲ್, 'ಅವರು ದೆಹಲಿಯ ಶಿಕ್ಷಣದ ಪ್ರಗತಿಯನ್ನು ತಡೆಯಲು ಬಯಸುತ್ತಾರೆ. ಅವರು (ಬಿಜೆಪಿ) ದೆಹಲಿಯ ಶಿಕ್ಷಣ ಕ್ರಾಂತಿಯನ್ನು ಕೊನೆಗೊಳಿಸಬೇಕೆಂದು ಬಯಸುತ್ತಾರೆ. ಆದರೆ, ನಾವು ಅದನ್ನು ಮಾಡಲು ಬಿಡುವುದಿಲ್ಲ' ಎಂದರು.
ದೆಹಲಿಯ ಸರ್ಕಾರಿ ಶಾಲೆಗಳ ಬಗ್ಗೆ ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬರೂ ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ. ನಮ್ಮ ಶಾಲೆಗಳು ಅತ್ಯುತ್ತಮವಾಗಿವೆ ಎಂದು ಅವರು ಹೇಳಿದರು.