ಮುಂದಿನ 24 ಗಂಟೆಗಳಲ್ಲಿ 'ಬಿಪೊರ್ ಜಾಯ್' ಚಂಡಮಾರುತ ತೀವ್ರ, ಕರ್ನಾಟಕ ಸೇರಿ 3 ರಾಜ್ಯಗಳಿಗೆ ಕಟ್ಟೆಚ್ಚರ
'ಬಿಪೊರ್‌ಜೋಯ್' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.
Published: 10th June 2023 09:38 AM | Last Updated: 10th June 2023 02:00 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: 'ಬಿಪೊರ್‌ಜೋಯ್' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.
ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿ ನೆಲೆಸಿರುವ ಚಂಡಮಾರುತವು ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.
ಮೂರು ರಾಜ್ಯಗಳಲ್ಲಿ ಭಾರೀ ಮಳೆ, ಎಚ್ಚರಿಕೆ: ಚಂಡಮಾರುತವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ಉಂಟುಮಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಗುಜರಾತ್, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಕೇರಳದ ಎಂಟು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಕಾಲಮಾನ ಜೂನ್ 9ರ ರಾತ್ರಿ 10.30ಕ್ಕೆ ಅತೀ ತೀವ್ರ ಚಂಡಮಾರುತ 'ಬಿಪೊರ್ ಜಾಯ್' ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಬೀಸಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮತ್ತು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹಾವಾಮಾನ ಇಲಾಖೆ ಟ್ವೀಟ್ ಮಾಡಿದೆ.
'ಬಿಪೊರ್ ಜಾಯ್' ಚಂಡಮಾರುತದ ನಿರೀಕ್ಷೆಯಲ್ಲಿ, ಅರಬ್ಬಿ ಸಮುದ್ರದ ಕರಾವಳಿಯ ವಲ್ಸಾದ್‌ನ ತಿಥಾಲ್ ಬೀಚ್‌ನಲ್ಲಿ ಎತ್ತರದ ಎಲೆಗಳು ಉಂಟಾಗಿವೆ. ಮುಂಜಾಗ್ರತಾ ಕ್ರಮವಾಗಿ ತಿಥಾಲ್ ಬೀಚ್ ನ್ನು ಜೂನ್ 14 ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ಮುಚ್ಚಲಾಗಿದೆ.
ತಿಥಾಲ್ ಬೀಚ್ ಗೆ ಎಚ್ಚರಿಕೆ: ಬಿಪೊರ್‌ಜೋಯ್ ಚಂಡಮಾರುತದ ನಿರೀಕ್ಷೆಯಲ್ಲಿ ಹೆಚ್ಚಿನ ಅಲೆಗಳು ಮತ್ತು ಬಲವಾದ ಗಾಳಿಯಿಂದಾಗಿ ಅರೇಬಿಯನ್ ಸಮುದ್ರದ ಕರಾವಳಿಯಲ್ಲಿರುವ ಗುಜರಾತ್‌ನ ವಲ್ಸಾದ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣ ತಿಥಾಲ್ ಬೀಚ್ ನ್ನು ಜೂನ್ 14 ರವರೆಗೆ ಪ್ರವಾಸಿಗರಿಗೆ ಮುಚ್ಚಲಾಗಿದೆ.
ಇದನ್ನೂ ಓದಿ: ಮುಂದಿನ 36 ಗಂಟೆಗಳಲ್ಲಿ ಬೈಪಾರ್ಜಾಯ್ ಚಂಡಮಾರುತ ತೀವ್ರ: ಉತ್ತರ-ವಾಯುವ್ಯ ದಿಕ್ಕಿನತ್ತ ಚಲನೆ
ಚಂಡಮಾರುತ ಭಾನುವಾರ ಅಥವಾ ಸೋಮವಾರ ದಕ್ಷಿಣ ಗುಜರಾತ್ ತಲುಪಬಹುದು. ಪ್ರಸ್ತುತ ಅಲರ್ಟ್ ಸೂಚನೆಯಲ್ಲಿದ್ದೇವೆ. ಎಲ್ಲಾ ಅಧಿಕಾರಿಗಳು ಪ್ರಧಾನ ಕಚೇರಿಯಿಂದ ಹೊರಹೋಗದಂತೆ ಸೂಚಿಸಲಾಗಿದೆ. SDRF (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇರಿಸಲಾಗಿದ್ದು, ಕರಾವಳಿ ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಅಗತ್ಯವಿದ್ದರೆ, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಸೂರತ್‌ನ ಕಲೆಕ್ಟರ್ ಬಿಕೆ ವಾಸವ ತಿಳಿಸಿದ್ದಾರೆ.
ಚಂಡಮಾರುತದಿಂದಾಗಿ ಇಂದು, ನಾಳೆ ಮತ್ತು 12 ರಂದು ದಕ್ಷಿಣ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯನ್ನು ತರುತ್ತದೆ. ಗುಜರಾತ್ ಮತ್ತು ಸೌರಾಷ್ಟ್ರಗಳಲ್ಲಿ ಸಹ ಮಳೆಯಾಗಲಿದೆ. ಎಲ್ಲಾ ಬಂದರುಗಳಿಗೆ ದೂರದ ಎಚ್ಚರಿಕೆಯ ಸಂಕೇತವನ್ನು ಕಳುಹಿಸಲಾಗಿದೆ ಎಂದು ಅಹಮದಾಬಾದ್ ನ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕಡಲ ಕಾನೂನಿಗೆ ಅನುಸಾರವಾಗಿ, ಮುಂಬರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ಹಡಗುಗಳನ್ನು ಎಚ್ಚರಿಸಲು ಬಂದರುಗಳು ಸಂಕೇತಗಳನ್ನು ಹಾರಿಸಬೇಕಾಗುತ್ತದೆ. ಕಡಲ ಚಟುವಟಿಕೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಡಗುಗಳು ಮತ್ತು ಅವರ ಸಿಬ್ಬಂದಿಗಳನ್ನು ರಕ್ಷಿಸಲು ಇದನ್ನು ಮಾಡಲಾಗುತ್ತದೆ.
ಇದನ್ನೂ ಓದಿ: ಕೇರಳಕ್ಕೆ ಮುಂಗಾರು ಪ್ರವೇಶ: ಬೆಂಗಳೂರು ಸೇರಿ ರಾಜ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ
ಬಿಪೊರ್ ಜಾಯ್ : ಚಂಡಮಾರುತಕ್ಕೆ ಬಾಂಗ್ಲಾದೇಶವು ಬಿಪೊರ್ ಜಾಯ್ ಎಂದು ಹೆಸರಿಸಿದೆ. ಈ ಹೆಸರಿನ ಅರ್ಥ ಬಂಗಾಳಿ ಭಾಷೆಯಲ್ಲಿ ವಿಪತ್ತು ಎಂದು. ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದ ಮೇಲೆ ರೂಪುಗೊಳ್ಳುವ ಎಲ್ಲಾ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (WMO) 2020ರಲ್ಲಿ ಹೆಸರನ್ನು ಅಳವಡಿಸಿಕೊಂಡಿದೆ.
36 ಗಂಟೆಗಳಲ್ಲಿ ತೀವ್ರ: ಮುಂದಿನ 36 ಗಂಟೆಗಳಲ್ಲಿ ಬಿಪೊರ್ ಜಾಯ್ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ.
ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
VSCS “Biparjoy” over eastcentral Arabian Sea, lay centered at 0530hrs IST of 10th June, near lat 16.5N & long 67.4E, likely to intensify further & move north-northeastwards during next 24 hours. More details: https://t.co/EGetkpfIzS pic.twitter.com/bvcsB3dME4
— India Meteorological Department (@Indiametdept) June 10, 2023