ಕಠ್ಮಂಡು ಮೇಯರ್ ಕಛೇರಿಯಲ್ಲಿ 'ಗ್ರೇಟರ್ ನೇಪಾಳ ನಕ್ಷೆ': ಅಖಂಡ ಭಾರತ ಕುರಿತು ವ್ಯಾಪಕ ಚರ್ಚೆ!

ನೂತನ ಸಂಸತ್ ಭವನದಲ್ಲಿ ಹಾಕಲಾಗಿರುವ ಅಖಂಡ ಭಾರತ ನಕ್ಷೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಇದಕ್ಕೆ ತಿರುಗೇಟು ನೀಡಿರುವ ನೇಪಾಳ ಕೂಡ ಭಾರತೀಯ ಪ್ರದೇಶಗಳನ್ನು ಒಳಗೊಂಡ ಗ್ರೇಟರ್ ನೇಪಾಳ ನಕ್ಷೆ ಮೂಲಕ ಸುದ್ದಿಗೆ ಗ್ರಾಸವಾಗಿದೆ.
ಗ್ರೇಟರ್ ನೇಪಾಳ ನಕ್ಷೆ
ಗ್ರೇಟರ್ ನೇಪಾಳ ನಕ್ಷೆ

ನವದೆಹಲಿ: ನೂತನ ಸಂಸತ್ ಭವನದಲ್ಲಿ ಹಾಕಲಾಗಿರುವ ಅಖಂಡ ಭಾರತ ನಕ್ಷೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಇದಕ್ಕೆ ತಿರುಗೇಟು ನೀಡಿರುವ ನೇಪಾಳ ಕೂಡ ಭಾರತೀಯ ಪ್ರದೇಶಗಳನ್ನು ಒಳಗೊಂಡ ಗ್ರೇಟರ್ ನೇಪಾಳ ನಕ್ಷೆ ಮೂಲಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ರಾಜಧಾನಿ ಕಠ್ಮಂಡು ಮೇಯರ್ ಶಾ ಅವರ ಕಛೇರಿಯಲ್ಲಿರುವ 'ಗ್ರೇಟರ್ ನೇಪಾಳ' ನಕ್ಷೆಯು ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದ ನೂತನ ಸಂಸತ್ತಿನಲ್ಲಿ (ಅಶೋಕನ ಸಾಮ್ರಾಜ್ಯದ ವಿಸ್ತಾರವನ್ನು ಬಿಂಬಿಸುವ) 'ಅಖಂಡ ಭಾರತ' ಭಿತ್ತಿಚಿತ್ರದ ಕುರಿತು ಭಾರತ ಮತ್ತು ನೇಪಾಳ ನಡುವೆ ಯಾವುದೇ ವಿವಾದಗಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಹೇಳಿದ ಒಂದು ದಿನದ ನಂತರ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಶುಕ್ರವಾರ ತಮ್ಮ ಚೇಂಬರ್‌ನಲ್ಲಿ ಭಾರತದ ಭಾಗಗಳನ್ನು ಒಳಗೊಂಡಿರುವ 'ಗ್ರೇಟರ್ ನೇಪಾಳ' ನಕ್ಷೆಯನ್ನು ಹಾಕಿದ್ದಾರೆ.

“ಮೇಯರ್ ಬಾಲೇಂದ್ರ ಶಾ ಅವರು ಗುರುವಾರ ತಮ್ಮ ಕಚೇರಿ ಸಿಬ್ಬಂದಿಗೆ ಕರೆ ಮಾಡಿ ತಮ್ಮ ಚೇಂಬರ್‌ನಲ್ಲಿ ನಕ್ಷೆಯನ್ನು ಹಾಕುವಂತೆ ಹೇಳಿದರು. ನೇಪಾಳದ ಇತಿಹಾಸವನ್ನು ನೆನಪಿಟ್ಟುಕೊಳ್ಳಲು ಇದನ್ನು ಮಾಡಲಾಗಿದೆ ಮತ್ತು ಇದು ರಾಷ್ಟ್ರೀಯತೆಯ ಸಕಾರಾತ್ಮಕ ಕಂಪನ್ನು ನೀಡುತ್ತದೆ ಎಂದು ಶಾ ಹೇಳಿದ್ದಾರೆ.

ಕುತೂಹಲಕಾರಿಯಾಗಿ, ಶಾ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಇಲ್ಲಿ ಅವರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಶಂಕರ್ ಅವರು ಗುರುವಾರ ಭಾರತದ ಸಂಸತ್ತಿನಲ್ಲಿನ ನಕ್ಷೆಯು ಸಾಂಸ್ಕೃತಿಕ ನಕ್ಷೆಯಾಗಿದೆ ಮತ್ತು ರಾಜಕೀಯವಲ್ಲ ಮತ್ತು ನೇಪಾಳದಂತಹ ಸ್ನೇಹಪರ ದೇಶಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ನೇಪಾಳದಲ್ಲಿ, ಚುನಾಯಿತ ನಾಯಕರು ಅನುಮೋದಿಸಲಾದ ನಕ್ಷೆಗಳನ್ನು ಮಾತ್ರ ಬಳಸಬೇಕಾಗಿರುವುದರಿಂದ 'ಗ್ರೇಟರ್ ನೇಪಾಳ' ನಕ್ಷೆಯನ್ನು ಹಾಕುವ ಮೇಯರ್ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. “ಶಾ ಚುನಾಯಿತ ಮೇಯರ್. ಅವರ ಸ್ಥಾನ ರಾಜ್ಯ ಸಚಿವರಿಗೆ ಸಮ. ಇದು ಭಾರತ ಮತ್ತು ನೇಪಾಳದ ನಡುವೆ ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಕಾರಣದಿಂದ ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರು ಸಂವಿಧಾನವನ್ನು ಅನುಸರಿಸಬೇಕು ”ಎಂದು ನೇಪಾಳದ ಪ್ರಸಿದ್ಧ ಕಾರ್ಟೋಗ್ರಾಫರ್ ಬುದ್ಧಿ ನಾರಾಯಣ್ ಶ್ರೇಷ್ಠ ಹೇಳಿದ್ದಾರೆ.

ಸಂಸತ್ತಿನಲ್ಲಿರುವ ಭಿತ್ತಿಚಿತ್ರವು ನೇಪಾಳದಲ್ಲಿರುವ ಪುರಾತನ ಸ್ಥಳಗಳಾದ ಲುಂಬಿನಿ ಮತ್ತು ಕಪಿಲವಸ್ತುವನ್ನು ಒಳಗೊಂಡಿದೆ. "ನಾವು ಭಾರತದ ಸಂಸತ್ತಿನಲ್ಲಿ ನಕ್ಷೆಯ ಸಮಸ್ಯೆಯನ್ನು ಎತ್ತಿದ್ದೆವು.. ಆದರೆ ಇದು ಐತಿಹಾಸಿಕ ನಕ್ಷೆಯಾಗಿದೆ ಮತ್ತು ರಾಜಕೀಯವಲ್ಲ ಎಂದು ಹೇಳಲಾಗಿದೆ" ಎಂದು ನೇಪಾಳದ ಪ್ರಧಾನಿ ಪುಷಾ ಕುಮಾರ್ ಪ್ರಚಂಡ ಬುಧವಾರ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com