ಪ್ರಧಾನಿ, ಸಿಜೆಐ, ವಿಪಕ್ಷ ನಾಯಕರನ್ನೊಳಗೊಂಡ ಸಮಿತಿ ನೀಡಿದ ಸಲಹೆಯಿಂದ ಚುನಾವಣಾ ಆಯುಕ್ತರ ನೇಮಕ: ಸುಪ್ರೀಂ ಕೋರ್ಟ್

ಚುನಾವಣೆಗಳ ಪರಿಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ಚುನಾವಣಾ ಆಯುಕ್ತರನ್ನು ನೇಮಿಸುತ್ತದೆ ಎಂದು ಆದೇಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚುನಾವಣೆಗಳ ಪರಿಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ಚುನಾವಣಾ ಆಯುಕ್ತರನ್ನು ನೇಮಿಸುತ್ತದೆ ಎಂದು ಆದೇಶ ನೀಡಿದೆ.

ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ  ಸಾಂವಿಧಾನಿಕ ಪೀಠ ಮಹತ್ವದ ತೀರ್ಪನ್ನು ನೀಡಿದೆ.

ಚುನಾವಣೆಗಳು ನಿಸ್ಸಂದೇಹವಾಗಿ ನ್ಯಾಯಯುತವಾಗಿರಬೇಕು. ಚುನಾವಣೆಗಳು ಶುದ್ಧತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಸರ್ವೋಚ್ಛ ನ್ಯಾಯಾಲಯವು ಭಾರತದ ಚುನಾವಣಾ ಆಯೋಗದೊಂದಿಗೆ ಅತ್ಯಂತ ಗಟ್ಟಿಯಾಗಿ ನಿಲ್ಲುತ್ತದೆ ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ.

ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕವನ್ನು ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶಕರು, ವಿಪಕ್ಷ ನಾಯಕರನ್ನೊಳಗೊಂಡ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆಂದು ಹೇಳಿದೆ.

ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ತರಹದ ವ್ಯವಸ್ಥೆಯನ್ನು ಕೋರಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಸಿಬಿಐ ನಿರ್ದೇಶಕರು ಅಥವಾ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ ಅವರ ನೇಮಕಕ್ಕೆ ಭಿನ್ನವಾಗಿ, ವಿರೋಧ ಪಕ್ಷದ ನಾಯಕ ಮತ್ತು ನ್ಯಾಯಾಂಗದ ಹೇಳಿಕೆಗೆ ಭಿನ್ನವಾಗಿ, ಕೇಂದ್ರವು ಏಕಪಕ್ಷೀಯವಾಗಿ ಚುನಾವಣಾ ಆಯೋಗದ ಸದಸ್ಯರನ್ನು ನೇಮಿಸಿದೆ ಎಂದು ಅರ್ಜಿಗಳಲ್ಲಿ ಆರೋಪಿಸಲಾಗಿತ್ತು.

ನ್ಯಾಯಪೀಠವು ಕಳೆದ ವರ್ಷ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು. ತೀರ್ಪನ್ನು ಕಾಯ್ದಿರಿಸುವಾಗ, ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ವಿಚಾರ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ತರಾತುರಿಯಲ್ಲಿ ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕುರಿತು ಕೇಂದ್ರವನ್ನು ಪ್ರಶ್ನಿಸಿತ್ತು. 24 ಗಂಟೆಗಳ ಒಳಗೆ ನೇಮಕಾತಿಗೆ ಸಂಬಂಧಿಸಿದ ಮೂಲ ಕಡತಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು, ಕಳೆದ ವರ್ಷದ ನವೆಂಬರ್ 18ರಂದು ತಮ್ಮ ಹಿಂದಿನ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ನವೆಂಬರ್ 19ರಂದು ಕೇಂದ್ರ ಸರ್ಕಾರ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಿತು. ಗೋಯೆಲ್ ನವೆಂಬರ್ 21ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ಮುಖ್ಯ ಚುನಾವಣಾ ಆಯುಕ್ತರ ನೇಮಕದ ಕಡತಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್‌, ಕಾನೂನು ಮತ್ತು ನ್ಯಾಯ ಸಚಿವಾಲಯವು ಚುನಾವಣಾ ಆಯುಕ್ತರ ನೇಮಕಕ್ಕೆ 4 ಹೆಸರುಗಳನ್ನು ಹೇಗೆ ಶಾರ್ಟ್‌ಲಿಸ್ಟ್ ಮಾಡಿತು ಎಂದು ಪ್ರಶ್ನಿಸಿದೆ. ಒಟ್ಟಾರೆಯಾಗಿ ಚುನಾವಣಾ ಆಯುಕ್ತರ ನೇಮಕದ ವಿಚಾರವಾಗಿ ಸುಪ್ರೀಂಕೋರ್ಟ್‌ ಇಂದು ನೀಡಿರುವ ತೀರ್ಪು ಐತಿಹಾಸಿಕವಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com