ಉತ್ತರ ಪ್ರದೇಶದಲ್ಲಿ ಮತ್ತೊಂದು ಎನ್ಕೌಂಟರ್: ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿ ಪೊಲೀಸರ ಗುಂಡಿಗೆ ಹತ
ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎನ್ಕೌಂಟರ್ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಕೇವಲ 8 ದಿನಗಳ ಅಂತರದಲ್ಲಿ ನಡೆದ 2ನೇ ಎನ್ಕೌಂಟರ್ ಇದಾಗಿದೆ.
Published: 06th March 2023 11:13 AM | Last Updated: 06th March 2023 02:53 PM | A+A A-

ಉತ್ತರ ಪ್ರದೇಶದಲ್ಲಿ 8 ದಿನದಲ್ಲಿ 2ನೇ ಎನ್ಕೌಂಟರ್
ಲಖನೌ: ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎನ್ಕೌಂಟರ್ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಕೇವಲ 8 ದಿನಗಳ ಅಂತರದಲ್ಲಿ ನಡೆದ 2ನೇ ಎನ್ಕೌಂಟರ್ ಇದಾಗಿದೆ.
2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕನ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಉಸ್ಮಾನ್ ಎಂಬಾತನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
2005ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆಯಾಗಿತ್ತು. ಈ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು 2023ರ ಫೆಬ್ರವರಿ 24 ರಂದು ಗುಂಡಿಕ್ಕಿ ಕೊಲೆ ಮಾಡಿದ್ದರು. ಪಾಲ್ ಹಾಗೂ ಅವರ ಇಬ್ಬರು ಗನ್ನರ್ಗಳನ್ನು ಪ್ರಯಾಗ್ರಾಜ್ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳಲ್ಲಿ ಒಬ್ಬನಾಗಿದ್ದ ಉಸ್ಮಾನ್ ಎಂಬಾತನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್‌ನನ್ನು ಎನ್‌ಕೌಂಟರ್ ಮಾಡಿದ ಯುಪಿ ಪೊಲೀಸರು!
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಪಾಲ್ ಹತ್ಯೆಯ ಆಘಾತಕಾರಿ ದೃಶ್ಯಗಳು ಎಲ್ಲೆಡೆ ಹರಿದಾಡಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಹಗಲಿನ ವೇಳೆಯೇ ನಡೆದ ಅಪರಾಧದ ಕುರಿತು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಪರಾಧದಲ್ಲಿ ಭಾಗಿಯಾಗಿರುವವರನ್ನು ಸರ್ಕಾರ ಹತ್ತಿಕ್ಕುತ್ತದೆ ಎಂದು ಹೇಳಿದ್ದರು.
ಮುಖ್ಯಮಂತ್ರಿಯವರ ಹೇಳಿಕೆಯನ್ನು ಉಲ್ಲೇಖಿಸಿ, ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಗಳ ಮಾಜಿ ಸಲಹೆಗಾರ ಶಲಭ್ ಮಣಿ ತ್ರಿಪಾಠಿ, ‘ನಾವು ಅಪರಾಧಿಗಳನ್ನು ಪುಡಿಮಾಡುತ್ತೇವೆ ಎಂದು ಹೇಳಿದ್ದೆವು. ಉಮೇಶ್ ಪಾಲ್ ಮೇಲೆ ಮೊದಲ ಗುಂಡು ಹಾರಿಸಿದ ವ್ಯಕ್ತಿಯನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಪ್ರಯಾಗ್‌ರಾಜ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬದ್ರಿ ವಿಶಾಲ್ ಸಿಂಗ್, ಉಸ್ಮಾನ್ ಗುಂಡೇಟಿನಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 15 ವರ್ಷಗಳ ಹಿಂದಿನ ಪ್ರಕರಣ: ಯುಪಿ ವಿಧಾನಸಭೆಯಿಂದ ಎಸ್‌ಪಿ ಶಾಸಕ ಅಬ್ದುಲ್ಲಾ ಅಜಂ ಖಾನ್ ಅನರ್ಹ
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಇದು ಎರಡನೇ ಎನ್ಕೌಂಟರ್ ಆಗಿದ್ದು, ರಾಜು ಪೌಲ್ ಕೊಲೆ ಆರೋಪಿ ಅತೀಕ್ ಅಹ್ಮದ್ನ ಆಪ್ತ ಸಹಾಯಕ ಅರ್ಬಾಜ್‌ನನ್ನು ಎನ್ಕೌಂಟರ್ ಮಾಡಲಾಗಿತ್ತು. ಉಮೇಶ್ ಪಾಲ್ ಹತ್ಯೆಗೆ ಬಳಸಿದ್ದ ಕ್ರೆಟಾ ಕಾರ್ನ್ನು ಅರ್ಬಾಜ್ ಓಡಿಸುತ್ತಿದ್ದ. ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್, ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಅತೀಕ್ ಅಹ್ಮದ್, ಆತನ ಸಹೋದರ ಹಾಗೂ ಮಾಜಿ ಶಾಸಕ ಅಶ್ರಫ್ ಆರೋಪಿಗಳಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ. ಚುನಾವಣೆಯಲ್ಲಿ ಖಾಲಿದ್ ಅಜೀಂ ಅವರನ್ನು ಪಾಲ್ ಸೋಲಿಸಿದ್ದರು ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು.