ವಿಚಾರಣೆಗೆ ಬಿಆರ್‌ಎಸ್ ನಾಯಕಿ ಕೆ.ಕವಿತಾ ಗೈರು; ಹೊಸ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯ
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ಗುರುವಾರ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮಾರ್ಚ್ 20ಕ್ಕೆ ಹೊಸ ಸಮನ್ಸ್ ಜಾರಿ ಮಾಡಿದೆ.
Published: 16th March 2023 04:27 PM | Last Updated: 16th March 2023 09:00 PM | A+A A-

ಬಿಆರ್‌ಎಸ್ ನಾಯಕಿ ಕೆ ಕವಿತಾ
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ಗುರುವಾರ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮಾರ್ಚ್ 20ಕ್ಕೆ ಹೊಸ ಸಮನ್ಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನಾಲಯದ ಸಮನ್ಸ್ ಮತ್ತು ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕವಿತಾ, ತನ್ನ ಸಮಸ್ಯೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಈ ಸಂಬಂಧ ಸಮಯಾವಕಾಶ ಬೇಕು ಎಂದು ಬುಧವಾರ ಇ.ಡಿಗೆ ಪತ್ರ ಬರೆದಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಮುಖ ಹಂತದಲ್ಲಿ ನಡೆಯುತ್ತಿರುವ ತನಿಖೆಯ ದೃಷ್ಟಿಯಿಂದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ, ಬಿಆರ್‌ಎಸ್ ಪಕ್ಷದ ಎಂಎಲ್‌ಸಿಯ ಆರು ಪುಟಗಳ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಆಕೆಯನ್ನು ಮಾರ್ಚ್ 20 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕವಿತಾ ಅವರು ಗುರುವಾರ ತಮ್ಮ ಅಧಿಕೃತ ಪ್ರತಿನಿಧಿಯನ್ನು (ಬಿಆರ್‌ಎಸ್ ಪಕ್ಷದ ಪದಾಧಿಕಾರಿ) ಕಳುಹಿಸಿದ್ದರು. ಅವರು ಕವಿತಾ ಅವರ ಬ್ಯಾಂಕ್ ಸ್ಟೇಟ್‌ಮೆಂಟ್, ವೈಯಕ್ತಿಕ ಮತ್ತು ವ್ಯವಹಾರದ ವಿವರಗಳನ್ನು ಪ್ರಕರಣದ ತನಿಖಾಧಿಕಾರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ವಿಚಾರಣೆಗೆ ಕೆ.ಕವಿತಾ ಗೈರು ಸಾಧ್ಯತೆ
ಈ ಪ್ರಕರಣದಲ್ಲಿ ಇ.ಡಿ ಸಮನ್ಸ್ ಪ್ರಶ್ನಿಸಿ ಮತ್ತು ಬಂಧನದಿಂದ ರಕ್ಷಣೆ ಕೋರಿ ಕವಿತಾ ಸಲ್ಲಿಸಿರುವ ಮನವಿಯನ್ನು ಮಾರ್ಚ್ 24ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ.
44 ವರ್ಷದ ರಾಜಕಾರಣಿಯನ್ನು ಮಾರ್ಚ್ 11 ರಂದು ಈ ಪ್ರಕರಣದಲ್ಲಿ ಮೊದಲು ವಿಚಾರಣೆ ನಡೆಸಲಾಯಿತು. ನಂತರ ಮಾರ್ಚ್ 16ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು.
ಇ.ಡಿಗೆ ಕಳುಹಿಸಿದ ಪತ್ರದಲ್ಲಿ ಕವಿತಾ ಅವರು, ಸಮನ್ಸ್‌ಗೆ ಖುದ್ಧಾಗಿ ಹಾಜರಾಗುವ ಅಗತ್ಯವಿಲ್ಲದ ಕಾರಣ ತಾವು ತಮ್ಮ 'ಅಧಿಕೃತ ಪ್ರತಿನಿಧಿ'ಯನ್ನು ಕಳುಹಿಸುತ್ತಿರುವುದಾಗಿತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 'ಸುಪ್ರೀಂ' ಮೊರೆ ಹೋದ ಕೆ ಕವಿತಾ
'ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಪ್ರಕ್ರಿಯೆಗಳು ಪವಿತ್ರ ಮತ್ತು ಶ್ರೇಷ್ಠವಾಗಿದ್ದು, ಈ ವಿಷಯದ ಸಮನ್ಸ್‌ಗೆ ಸಂಬಂಧಿಸಿದಂತೆ ಯಾವುದೇ ಮುಂದಿನ ಪ್ರಕ್ರಿಯೆಗಳು ನಡೆಯುವ ಮೊದಲು ನ್ಯಾಯಾಲಯದ ಫಲಿತಾಂಶವನ್ನು ನಿರೀಕ್ಷಿಸಬೇಕು ಎಂದು ನಾನು ನಿಮ್ಮನ್ನು ವಿನಮ್ರವಾಗಿ ಬೇಡಿಕೊಳ್ಳುತ್ತೇನೆ' ಎಂದು ಅವರು ಬರೆದಿದ್ದಾರೆ.