ನವದೆಹಲಿ: ದ್ವೇಷ ಭಾಷಣವು ವಿಷ ವರ್ತುಲವಿದ್ದಂತೆ. ರಾಜ್ಯ ಸರ್ಕಾರಗಳು ದುರ್ಬಲಗೊಂಡಿರುವುದರಿಂದ ಹಾಗೂ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದಾಗಿ ಇದು ಮುಂದುವರಿಯುತ್ತಲೇ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜಕಾರಣ ಮತ್ತು ಧರ್ಮ ಪ್ರತ್ಯೇಕಗೊಂಡಾಗ ಹಾಗೂ ಜನಪ್ರತಿನಿಧಿಗಳು ರಾಜಕಾರಣದಲ್ಲಿ ಧರ್ಮ ಬೆರೆಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣದ ಸಮಸ್ಯೆ ಕೊನೆಗೊಳ್ಳಲಿದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ದ್ವೇಷ ಭಾಷಣ ಸಂಬಂಧ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಇದರ ವಿಚಾರಣೆ ನಡೆಸಿತು.
ಸಮಾಜಕ್ಕೆ ಮಾರಕವಾಗಿರುವ ಈ ಅಪರಾಧವನ್ನು ತೊಡೆದುಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಏಕೆ ಸೂಕ್ತ ಕಾರ್ಯವಿಧಾನ ರೂಪಿಸುತ್ತಿಲ್ಲ’ ಎಂದು ಪ್ರಶ್ನಿಸಿರುವ ನ್ಯಾಯಪೀಠ, ‘ದೇಶದಲ್ಲಿನ ಭ್ರಾತೃತ್ವದ ಕಲ್ಪನೆಯಲ್ಲಿ ಈಗ ಬಿರುಕುಗಳು ಮೂಡುತ್ತಿವೆ. ಇದು ವಿಷಾದನೀಯ ಎಂದು ತಿಳಿಸಿದೆ.
ಕೆಲವರು ದುರುದ್ದೇಶದಿಂದ ದ್ವೇಷದ ಭಾಷಣಗಳನ್ನು ಮಾಡುವ ಮೂಲಕ ಸಮಾಜದ ಶಾಂತಿ ಮತ್ತು ಸೌಹರ್ದತೆ ಕದಡಲು ಪ್ರಯತ್ನಿಸುತ್ತಾರೆ. ಆದರೆ, ಜನರು ಎಚ್ಚರಿಕೆ ವಹಿಸಬೇಕು ಎಂದು ಕೋರ್ಟ್ ಹೇಳಿದೆ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ದೂರದ ಪ್ರದೇಶಗಳು ಮತ್ತು ಮೂಲೆ ಮೂಲೆಗಳಿಂದ ಜನರು ಅವರ ಭಾಷಣ ಕೇಳಲು ಸೇರುತ್ತಿದ್ದರು ಎಂದು ಹೇಳಿದರು.
ಹೀಗೆ ನೋಡಿದರೆ ಎಷ್ಟು ಜನರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಪ್ರಾರಂಭಿಸಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದ ಪೀಠ, ಇತರ ನಾಗರಿಕರು ಅಥವಾ ಸಮುದಾಯಗಳನ್ನು ನಿಂದಿಸುವುದಿಲ್ಲ ಎಂದು ಭಾರತದ ಜನರು ಏಕೆ ಪ್ರತಿಜ್ಞೆ ತೆಗೆದುಕೊಳ್ಳಬಾರದು ಎಂದು ಹೇಳಿದೆ.
ದ್ವೇಷದ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಫಲವಾಗಿರುವ ವಿವಿಧ ರಾಜ್ಯಗಳ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ದೈನಂದಿನ ಅಂಚಿನ ಅಂಶಗಳು ಟಿವಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸೇರಿದಂತೆ ಇತರರನ್ನು ನಿಂದಿಸಲು ಭಾಷಣಗಳನ್ನು ಮಾಡುತ್ತಿವೆ ಎಂದು ಪೀಠ ಹೇಳಿದೆ.
ಕೇವಲ ದೂರು ದಾಖಲಿಸುವುದರಿಂದ ದ್ವೇಷ ಭಾಷಣದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಎಫ್‌ಐಆರ್‌ಗಳಿಗೆ ಅನುಸಾರವಾಗಿ ಬೇರೆ ಯಾವುದಾದರೂ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ’ ಎಂದು ನ್ಯಾಯಪೀಠವು ಮಂಗಳವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.
ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇರಳದಲ್ಲಿ ನಡೆದಿರುವ ಘಟನೆಯೊಂದಕ್ಕೆ ಸಂಬಂಧಿಸಿದ ವಿಡಿಯೊ ತುಣುಕನ್ನು ಪ್ರದರ್ಶಿಸುವಂತೆ ಮನವಿ ಮಾಡಿದರು. ಆಗ ನ್ಯಾಯಪೀಠವು, ‘ರಾಜ್ಯ ಸರ್ಕಾರಗಳು ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡದಿರುವುದರಿಂದಾಗಿ ಇದು ಮುಂದುವರಿಯುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಮೌನಕ್ಕೆ ಜಾರಿದ್ದು, ಇಂತಹ ಸರ್ಕಾರಗಳು ನಮಗೆ ಬೇಕೆ’ ಎಂದು ಮೆಹ್ತಾ ಅವರನ್ನು ಪ್ರಶ್ನಿಸಿತು.
‘ಕೇರಳ ಹಾಗೂ ತಮಿಳುನಾಡಿನಲ್ಲಿ ವರದಿಯಾಗಿರುವ ದ್ವೇಷ ಭಾಷಣದ ಕುರಿತು ಪರಿಶೀಲನೆ ನಡೆಸಲು ನಾವೇಕೆ ಹಿಂಜರಿಯುತ್ತಿದ್ದೇವೆ. ಹಿಂದೂಗಳು ಹಾಗೂ ಕ್ರೈಸ್ತರು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇರಳದಲ್ಲಿ ಹೇಳಲಾಗಿದೆ. ಇದು ಇತರ ಧರ್ಮಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆ ಎಂಬುದು ಸ್ಪಷ್ಟ. ಇದಕ್ಕೂ ರಾಜಕಾರಣಕ್ಕೂ ಯಾವ ಸಂಬಂಧವೂ ಇಲ್ಲ. ಇದು ಆಘಾತಕಾರಿಯಾದುದು. ಈ ನ್ಯಾಯಾಲಯದ ಆತ್ಮಸಾಕ್ಷಿಗೆ ಪೆಟ್ಟು ನೀಡುವಂತಹದ್ದು’ ಎಂದು ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಇದರ ಬಗ್ಗೆ ನಮಗೆ ಗೊತ್ತಿದೆ’ ಎಂದು ತಿಳಿಸಿತು. ಆಗ ಮೆಹ್ತಾ, ‘ಹಾಗಿದ್ದ ಮೇಲೆ ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದರು.
ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರೊಬ್ಬರು ಸಮಾನತೆ ಬೇಕಿದ್ದರೆ ಎಲ್ಲಾ ಬ್ರಾಹ್ಮಣರನ್ನೂ ಕೊಂದು ಹಾಕಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲಾ ಬಿಟ್ಟು ಅರ್ಜಿದಾರರು ಆಯ್ದ ಕೆಲವನ್ನಷ್ಟೇ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ವರದಿಯಾಗಿರುವ ಪ್ರಕರಣಗಳನ್ನೂ ಅರ್ಜಿಯಲ್ಲಿ ಸೇರ್ಪಡೆ ಮಾಡಲು ಅವರಿಗೆ ಹೇಳಿ ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ‘ರಾಜ್ಯ ಸರ್ಕಾರಗಳು ನಿಸ್ಸಹಾಯಕವಾಗಿರುವುದಿಂದ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ’ ಎಂದು ನ್ಯಾಯಮೂರ್ತಿ ಜೋಸೆಫ್ ಪ್ರತಿಕ್ರಿಯಿಸಿದರು.
Advertisement