ಹೊಸ ವಿದೇಶಿ ವ್ಯಾಪಾರ ನೀತಿ-2023 ಬಿಡುಗಡೆ: 2030 ರ ವೇಳೆಗೆ ಭಾರತದ ರಫ್ತು ಪ್ರಮಾಣ 2 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿ
ಹೊಸ ವಿದೇಶಿ ವ್ಯಾಪಾರ ನೀತಿ-2023ನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಹೊಸ ನೀತಿಯಲ್ಲಿ 2030ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
Published: 31st March 2023 02:57 PM | Last Updated: 31st March 2023 03:00 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಹೊಸ ವಿದೇಶಿ ವ್ಯಾಪಾರ ನೀತಿ-2023ನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಹೊಸ ನೀತಿಯಲ್ಲಿ 2030ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ನವದೆಹಲಿಯಲ್ಲಿ ವಿದೇಶಿ ವ್ಯಾಪಾರ ನೀತಿ 2023 ಅನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಗೋಯಲ್ ಅವರು 2030 ರ ವೇಳೆಗೆ ಭಾರತದ ರಫ್ತು ವ್ಯಾಪಾರವು 2 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ಥವಾಲ್ ಅವರು ಮಾತನಾಡಿ, ಹೊಸ ವಿದೇಶಿ ವ್ಯಾಪಾರ ನೀತಿಯು ಭಾರತೀಯ ರೂಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡಲಿದೆ. ಕರೆನ್ಸಿ ವೈಫಲ್ಯ ಅಥವಾ ಡಾಲರ್ ಕೊರತೆ ಎದುರಿಸುತ್ತಿರುವ ದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತ ಸಿದ್ಧವಿದೆ ಎಂಬುದು ನೀತಿಯ ಸಾರವಾಗಿದೆ ಎಂದು ಹೇಳಿದರು.
ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ ಡಿಜಿ (ಡಿಜಿಎಫ್‌ಟಿ) ಸಂತೋಷ್ ಸಾರಂಗಿ ಅವರು ಮಾತನಾಡಿ, ಹೊಸ ವಿದೇಶಿ ವ್ಯಾಪಾರ ನೀತಿಯು ದೀರ್ಘಾವಧಿಯ ಮೇಲೆ ಕೇಂದ್ರೀಕರಿಸುತ್ತದೆ. ಹಿಂದಿನ ವರ್ಷಗಳಲ್ಲಿ ನೀತಿ ಕೇವಲ ಐದು ವರ್ಷಗಳ ಅವಧಿಗೆ ಕೇಂದ್ರೀಕರಿಸುತ್ತಿತ್ತು. ಈ ಸಂಪ್ರದಾಯವನ್ನು ಹೊಸ ನೀತಿಯು ಮುರಿದಿದೆ ಮತ್ತು ಇದು ಅಂತಿಮ ದಿನಾಂಕವಿಲ್ಲ ಮತ್ತು ಅಗತ್ಯವಿದ್ದಾಗ ಪರಿಷ್ಕರಿಸಲಾಗುತ್ತದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಹೇಳಿದೆ.
ವಿದೇಶಿ ವ್ಯಾಪಾರ ನೀತಿ ಬಿಡುಗಡೆ ಸಮಾರಂಭದಲ್ಲಿ ವಿಷಯ ಮಂಡನೆ ಮಾಡಿದ ವಾಣಿಜ್ಯ ಸಚಿವಾಲಯ, ಡಬ್ಲ್ಯುಟಿಒದ ಜಾಗತಿಕ ವ್ಯಾಪಾರ ಮುನ್ಸೂಚನೆಯು 2023 ರಲ್ಲಿ ಜಾಗತಿಕ ವ್ಯಾಪಾರದಲ್ಲಿ ಶೇಕಡಾ ಒಂದರಷ್ಟು ನಿಧಾನಗತಿಯ ಮುನ್ಸೂಚನೆ ನೀಡಿದೆ. ಮಾರ್ಚ್ 2023 ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿ ಸುಮಾರು 3.5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಮಾಹಿತಿ ನೀಡಿತು.
ಭಾರತವು 2022-23ರಲ್ಲಿ 765 ಶತಕೋಟಿ ಮೌಲ್ಯದ ಸರಕು ರಫ್ತು ಮಾಡುವ ಸಾಧ್ಯತೆಯಿದೆ ಎಂದು ಸಾರಂಗಿ ಹೇಳಿದರು.
ಹೊಸ ನೀತಿಯ ಅಡಿಯಲ್ಲಿ ಡೈರಿ ವಲಯಕ್ಕೆ ಸರಾಸರಿ ರಫ್ತು ಬಾಧ್ಯತೆಯ ನಿಯಮದಿಂದ ವಿನಾಯಿತಿ ನೀಡಲಾಗಿದೆ. ವಿಶೇಷ ಮುಂಗಡ ಅಧಿಕಾರ ಯೋಜನೆಯನ್ನು ಉಡುಪು ಮತ್ತು ಬಟ್ಟೆ ವಲಯಕ್ಕೆ ವಿಸ್ತರಿಸಲಾಗಿದೆ ಎಂದು ಡಿಜಿಎಫ್‌ಟಿ ಹೇಳಿದೆ.