ನವದೆಹಲಿ: ಕೇದಾರನಾಥದಲ್ಲಿ ಕಳೆದ 2 ದಿನಗಳಿಂದ ನಿರಂತರ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 3ರಂದು ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹಿಮಪಾತದಿಂದ ಕೇದಾರನಾಥದಲ್ಲಿ ಚಳಿ ಹೆಚ್ಚಾಗಿದ್ದು, ಇದರಿಂದಾಗಿ ಅಲ್ಲಿಗೆ ಯಾತ್ರೆಗೆ ಹೋಗುವವರಿಗೂ ಸಮಸ್ಯೆಗಳು ಎದುರಾಗಿವೆ. ಹಿಮಪಾತ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಉಳಿದುಕೊಳ್ಳುವಂತೆ ಯಾತ್ರಾರ್ಥಿಗಳಿಗೆ ಸಲಹೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಏಪ್ರಿಲ್ 30ರವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಹಿಮಪಾತ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರಿಕರ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಂದಣಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
ರಿಷಿಕೇಶದಲ್ಲಿರುವ ಪ್ರಯಾಣಿಕರ ನೋಂದಣಿ ಕೇಂದ್ರದಲ್ಲಿ ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಮಾತ್ರ ನೋಂದಣಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹವಾಮಾನ ಇಲಾಖೆಯು ಮುಂದಿನ 2-3 ದಿನಗಳ ಕಾಲ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತದ ಎಚ್ಚರಿಕೆಯನ್ನು ನೀಡಿದೆ.
Advertisement