ಶಿವಸೇನೆ v/s ಶಿವಸೇನೆ: ಠಾಕ್ರೆ ಸರ್ಕಾರ ಪುನಃಸ್ಥಾಪಿಸಲು ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಬಣದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಬಣದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಮಹಾರಾಷ್ಟ್ರ ಮೂಲ ಶಿವಸೇನೆಯಿಂದ ಬಂಡಾಯವೆದ್ದು ಏಕನಾಥ ಶಿಂಧೆ ಹಿಂದೆ ಹೋಗಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ಸೇರಿದಂತೆ 2 ತೀರ್ಪುಗಳನ್ನು ಸುಪ್ರೀಂಕೋರ್ಟ್‌ ಇಂದು ಪ್ರಕಟಿಸಿದೆ.

ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್‌, ಉದ್ಧವ್‌ ಠಾಕ್ರೆ ವಿಶ್ವಾಸಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ್ದರಿಂದ ಸರ್ಕಾರವನ್ನು ಮರುಸ್ಥಾಪಿಸಲಾಗದು ಎಂದು ಹೇಳಿದೆ.

ಉಧ್ಧವ್‌ ಠಾಕ್ರೆ ರಾಜೀನಾಮೆ ನೀಡಿದ್ದರಿಂದ ಏಕನಾಥ ಶಿಂಧೆ ನೇತೃತ್ವದ ಬಣವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಕ್ರಮ ಸರಿಯಾಗಿತ್ತು. ಆದರೆ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿ ಸದನಲ್ಲಿ ಬಹುಮತ ಸಾಬೀತುಪಡಿಸಲು ಆದೇಶಿಸಿದ್ದೂ ಸರಿಯಾದ ನಿರ್ಧಾರವಲ್ಲ ಎಂದು ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆ.

ಠಾಕ್ರೆ ಸರ್ಕಾರದ ಬಹುಮತವನ್ನು ರಾಜ್ಯಪಾಲರು ಅನುಮಾನಿಸುವುದಕ್ಕೆ ಸಾಧ್ಯವಿರಲಿಲ್ಲ. ಕೆಲವು ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನುವುದಷ್ಟೇ ವಿಶ್ವಾಸಮತ ಯಾಚನೆಗೆ ಸೂಚಿಸಲು ಸಾಕಾಗುವುದಿಲ್ಲ, "ಸದಸ್ಯರು ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಎನ್ನುವುದನ್ನು ಸೂಚಿಸುವ ಯಾವುದೇ ದಾಖಲೆಗಳಿರಲಿಲ್ಲ. ಉದ್ಧವ್‌ ಠಾಕ್ರೆ ಸರ್ಕಾರದ ಕೆಲವು ನೀತಿ ನಿರ್ಧಾರಗಳೊಂದಿಗೆ ಅವರು ಸಹಮತ ಹೊಂದಿರಲಿಲ್ಲ ಎನ್ನುವುದನ್ನಷ್ಟೇ ಲಭ್ಯ ಸಂವಹನವು ತೋರಿಸುತ್ತದೆ. ಅವರು (ಶಿಂಧೆ ಬಣ) ಈ ವಿಚಾರವಾಗಿ ಚರ್ಚಿಸುತ್ತಾರೆಯೇ ಅಥವಾ ಬೇರೆ ಪಕ್ಷದೊಂದಿಗೆ ವಿಲೀನಗೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿರಲಿಲ್ಲ". ಹಾಗಾಗಿ ಉದ್ಧವ್ ಠಾಕ್ರೆ ಅವರು ಸದನದಲ್ಲಿ ಬಹುಮತ ಕಳೆದುಕೊಂಡಿದ್ದಾರೆ ಎಂದು ರಾಜ್ಯಪಾಲರು ನಿರ್ಧರಿಸುವಲ್ಲಿ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ರಾಜ್ಯಪಾಲರು ವಸ್ತುನಿಷ್ಠ ಮಾನದಂಡಗಳನ್ನು ಬಳಸಬೇಕು, ವ್ಯಕ್ತಿನಿಷ್ಠ ತೃಪ್ತಿಯನ್ನಲ್ಲ. ಶಾಸಕರು ಸರ್ಕಾರ ತೊರೆಯಲು ಬಯಸಿದ್ದರು ಎಂದು ಒಂದು ವೇಳೆ ಭಾವಿಸಿದರೂ, ಅದು ಕೇವಲ ಅತೃಪ್ತಿಯನ್ನು ಮಾತ್ರ ಬಿಂಬಿಸುತ್ತದೆ. ಅರ್ಜಿದಾರರು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಆದೇಶಿಸುವಂತೆ ಒತ್ತಾಯಿಸಿದ್ದಾರೆ. ಠಾಕ್ರೆ ರಾಜೀನಾಮೆ ನೀಡದಿರುತ್ತಿದ್ದರೆ ಅವರ ನೇತೃತ್ವದ ಸರ್ಕಾರವನ್ನು ಮರು ಸ್ಥಾಪನೆಗೊಳಿಸಬಹುದಿತ್ತು. ಈ ಮೂಲಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಆದೇಶಿಸಬಹುದಿತ್ತು. ಆದರೆ, ಠಾಕ್ರೆ ವಿಶ್ವಾಸ ಮತ ಪರೀಕ್ಷೆಯನ್ನೂ ಎದುರಿಸದೆಯೇ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಠಾಕ್ರೆ ಸರ್ಕಾರ ಪುನಃಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿತು.

ಜೊತೆಗೆ ಏಕನಾಥ ಶಿಂಧೆ ಬಣದ ವಿಪ್‌ ನೇಮಕವನ್ನು ಸ್ಪೀಕರ್‌ ಮಾಡಿರುವುದು ಕೂಡ ತಪ್ಪು. ವಿಪ್‌ ನೇಮಕದ ಅಧಿಕಾರ ರಾಜಕೀಯ ಪಕ್ಷದ್ದಾಗಿದೆ. ಪಕ್ಷದ ಆಂತರಿಕ ಕಲಹವನ್ನು ಇತ್ಯರ್ಥಪಡಿಸಲು ವಿಶ್ವಾಸ ಮತ ಪರೀಕ್ಷೆಯನ್ನು ಬಳಸಬಾರದು. ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಥವಾ ಪಕ್ಷ- ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಮಾಧ್ಯಮವಾಗಿ ವಿಶ್ವಾಸಮತ ಯಾಚಿಸುವಂತೆ ಸೂಚಿಸಲು ಬಳಸಲಾಗುವುದಿಲ್ಲ. ಸರ್ಕಾರವನ್ನು ಬೆಂಬಲಿಸದಿರುವುದಕ್ಕೂ ಮತ್ತು ಕೆಲವು ರಾಜಕೀಯ ಪಕ್ಷದ ಸದಸ್ಯರು ಅತೃಪ್ತರಾಗಿದ್ದಾರೆ ಎಂಬುದಕ್ಕೂ ವ್ಯತ್ಯಾಸ ಇದೆ. ಸಂವಿಧಾನ ಅಥವಾ ಕಾನೂನು ರಾಜ್ಯಪಾಲರಿಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮತ್ತು ಅಂತರ್ ಪಕ್ಷ ಅಥವಾ ಪಕ್ಷದ ಆಂತರಿಕ ವಿವಾದಗಳಲ್ಲಿ ಪಾತ್ರ ವಹಿಸಲು ಅಧಿಕಾರ ನೀಡುವುದಿಲ್ಲ. ರಾಜ್ಯಪಾಲರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಪಕ್ಷಗಳ ನಡುವಿನ ವಿವಾದದಲ್ಲಿ ಪಾತ್ರ ವಹಿಸುವಂತಿಲ್ಲ. ಕೆಲ ಸದಸ್ಯರು ಶಿವಸೇನೆ ತೊರೆಯಲು ಬಯಸುತ್ತಾರೆ ಎಂಬುದನ್ನು ಆಧರಿಸಿ ಅವರು ಕಾರ್ಯನಿರ್ವಹಿಸಬಾರದಿತ್ತು. ಇದರರ್ಥ ಆ ಶಾಸಕರು ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ ಎಂದಲ್ಲ, ಈ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯಪಾಲರ ವಿವೇಚನಾಧಿಕಾರವು ಸಂವಿಧಾನಿಕವಾಗಿಲ್ಲ ಎಂದು ತಿಳಿಸಿತು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠವು ನಬಮ್ ರೆಬಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ತೀರ್ಪಿನಲ್ಲಿ ನೀಡಲಾದ ಸ್ಪೀಕರ್ ಅಧಿಕಾರಕ್ಕೆ ಸಂಬಂಧಿಸಿದ ವಿಷಯವನ್ನು ವಿಸ್ತೃತ ಪೀಠದ ಪರಿಗಣನೆಗೆ ಶಿಫಾರಸ್ಸು ಮಾಡಿದೆ.

ನಬಮ್ ರೆಬಿಯಾ ತೀರ್ಪು ತನ್ನ ವಿರುದ್ಧ ಅನರ್ಹತೆಯ ನೋಟಿಸ್ ಬಾಕಿ ಉಳಿದಿರುವ ಸ್ಪೀಕರ್‌, ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಣಯ ಕೈಗೊಳ್ಳಬಹುದೇ ಎಂಬುದನ್ನು ನಿರ್ಧರಿಸುವುದಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

"ಸ್ಪೀಕರ್ ಅವರನ್ನು ಪದಚ್ಯುತಿ ಮಾಡಲು ನೀಡಿದ ನೋಟಿಸ್ ಸದಸ್ಯರ ಅನರ್ಹತೆಯನ್ನು ನಿರ್ಧರಿಸುವುದನ್ನು ತಡೆಯುತ್ತದೆಯೇ?." ಎಂಬ ಪ್ರಶ್ನೆಗೆ ವಿಸೃತ ಪೀಠ ಉತ್ತರ ಕಂಡುಕೊಳ್ಳಬೇಕು ಎಂದು ಅದು ತಿಳಿಸಿದೆ.

ಬಹುಮುಖ್ಯವಾಗಿ, ಶಾಸಕಾಂಗ ಪಕ್ಷವು (ಅಂದರೆ ಸದನದಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಬಹುಪಾಲು ಶಾಸಕರು) ಪಕ್ಷದ ಮುಖ್ಯ ಸಚೇತಕರನ್ನು (ವಿಪ್‌) ನೇಮಿಸುವ ಅಧಿಕಾರ ಹೊಂದಿಲ್ಲ. ಅದು ಸಂಬಂಧಪಟ್ಟ ರಾಜಕೀಯ ಪಕ್ಷದ ಕೆಲಸ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಶಾಸಕಾಂಗ ಪಕ್ಷವು ಮುಖ್ಯ ಸಚೇತಕರನ್ನು ನೇಮಿಸುವುದೆಂದರೆ ಅದು ತನ್ನ ರಾಜಕೀಯ ಪಕ್ಷದೊಂದಿಗೆ ಹೊಂದಿರುವ ಕರುಳಬಳ್ಳಿಯನ್ನು ಕತ್ತರಿಸಿದಂತೆ ಎಂದು ಪೀಠವು ವಿವರಿಸಿದೆ.

ಹಾಗಾಗಿ, ಶಿವಸೇನೆಯ ಶಿಂಧೆ ಬಣದಿಂದ ಸದನದಲ್ಲಿ ಪಕ್ಷದ ವಿಪ್ ಆಗಿ ನೇಮಕಗೊಂಡಿದ್ದ ಭರತ್‌ಶೇಟ್‌ ಗೊಗವಾಳೆ ಅವರನ್ನು ನೇಮಕವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com