ಕಳ್ಳಬಟ್ಟಿ ದುರಂತ: ತಮಿಳುನಾಡಿನ ಮೂರು ಗ್ರಾಮಗಳಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ, 7 ಪೊಲೀಸರ ಅಮಾನತು

ಮರಕ್ಕನಂ ಮತ್ತು ಮಧುರಾಂತಕಂನಲ್ಲಿ ಕಳ್ಳಬಟ್ಟಿ ಸೇವಿಸಿ ವೃದ್ಧ ಮಹಿಳೆ ಸೇರಿದಂತೆ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮರಕ್ಕನಂನಲ್ಲಿ ಆರು ಮಂದಿ ಮೃತಪಟ್ಟರೆ, ಮಧುರಾಂತಕಂನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 
ಕಳ್ಳಬಟ್ಟಿ ದುರಂತದಿಂದ ಸಾವಿಗೀಡಾದವರ ಕುಟುಂಬಸ್ಥರ ರೋಧನೆ
ಕಳ್ಳಬಟ್ಟಿ ದುರಂತದಿಂದ ಸಾವಿಗೀಡಾದವರ ಕುಟುಂಬಸ್ಥರ ರೋಧನೆ

ವಿಲ್ಲುಪುರಂ/ಚೆನ್ನೈ: ಮರಕ್ಕನಂ ಮತ್ತು ಮಧುರಾಂತಕಂನಲ್ಲಿ ಕಳ್ಳಬಟ್ಟಿ ಸೇವಿಸಿ ವೃದ್ಧ ಮಹಿಳೆ ಸೇರಿದಂತೆ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮರಕ್ಕನಂನಲ್ಲಿ ಆರು ಮಂದಿ ಮೃತಪಟ್ಟರೆ, ಮಧುರಾಂತಕಂನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 

ದುರಂತದ ನಂತರ, ಭಾನುವಾರ ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಏಳು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಎರಡು ಘಟನೆಗಳಿಗೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಲ್ಲುಪುರಂ ಜಿಲ್ಲೆಯ ಎಕ್ಕಿಯಾರ್ಕುಪ್ಪಂ ಮೀನುಗಾರಿಕಾ ಗ್ರಾಮದ ಸುಮಾರು 80 ನಿವಾಸಿಗಳು ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಮಾರಾಟವಾದ ಕಳ್ಳಬಟ್ಟಿಯನ್ನು ಸೇವಿಸಿದ್ದಾರೆ. ಅವರಲ್ಲಿ ಹಲವರು ಶನಿವಾರ ಅಸ್ವಸ್ಥರಾಗಿದ್ದರು ಮತ್ತು ಕನಿಷ್ಠ 20 ಗ್ರಾಮಸ್ಥರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿಜೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ ಪಾಂಡಿಚೇರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಜಿಪ್‌ಮರ್‌ನಲ್ಲಿ ಪಿ ಸುರೇಶ್ (48) ಮತ್ತು ಎಸ್ ಶಂಕರ್ (59) ಮೃತಪಟ್ಟರೆ, ಜಿ ದರಣಿವೇಲ್ (55) ಭಾನುವಾರ ಮುಂಜಾನೆ ಜಿಪ್ಮರ್‌ನಲ್ಲಿ ನಿಧನರಾದರು. ಭಾನುವಾರ ಸಂಜೆ ಡಿ ರಾಜಮೂರ್ತಿ (60) ಮತ್ತು ಮಲರ್ವಿಜಿ (70) ಮುಂಡಿಯಂಪಕ್ಕಂನ ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮತ್ತು ಮನ್ನಂಗ್ಕಟ್ಟಿ (50) ತಿಂಡಿವನಂ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಮದ್ಯ ಸೇವಿಸಿದ ಬಳಿಕ ಶುಕ್ರವಾರ ಸಂಜೆಯಿಂದ ಅಸ್ವಸ್ಥರಾಗಿದ್ದರು ಮತ್ತು ಬೇರೆ ಏನನ್ನೂ ಸೇವಿಸಿರಲಿಲ್ಲ. ಶನಿವಾರ ಸಂಜೆ ಅವರು ಮೂರ್ಛೆ ಹೋದರು ಮತ್ತು ಅವರನ್ನು ಮರಕ್ಕನಂನಲ್ಲಿರುವ ಜಿಎಚ್‌ಗೆ ಸಾಗಿಸಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಪಿಐಎಂಎಸ್‌ಗೆ ಸ್ಥಳಾಂತರಿಸಲಾಗಿತ್ತು ಎಂದು ಮೃತ ಸುರೇಶ್ ಕುಟುಂಬದವರು ತಿಳಿಸಿದ್ದಾರೆ.

ಅವರು ಕಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದರು ಮತ್ತು ಶನಿವಾರ ಮಧ್ಯಾಹ್ನ ಮನೆಗೆ ಹಿಂತಿರುಗಿದರು. ಬಳಿಕ ಸಂಜೆ ಸ್ನೇಹಿತರನ್ನು ಭೇಟಿಯಾಗಲೆಂದು ಹೊರಗಡೆ ತೆರಳಿದ್ದರು. ಬಳಿಕ ಕೂಡಲೇ ಗ್ರಾಮಸ್ಥರ ಸಹಾಯದಿಂದ ಮನೆಗೆ ಹಿಂತಿರುಗಿದರು. ಆಗ ಅವರು ತಮಗೆ ಕಣ್ಣು ಕಾಣಿಸುತ್ತಿಲ್ಲ ಎಂದರು. ನಂತರ ದೇಹದಾದ್ಯಂತ ನೋವು ಎಂದರು ಮತ್ತು ಆಸ್ಪತ್ರೆಗೆ ಸಾಗಿಸಿದೆವು ಎನ್ನುತ್ತಾರೆ ದರಣಿವೇಲ್ ಅವರ ಪತ್ನಿ ಮುನಿಯಮ್ಮ.

ಘಟನೆ ಸಂಬಂಧ, ವಿಚಾರಣೆ ನಡೆಸಿದಾಗ ಪುದುಚೇರಿಯಿಂದ ಈ ಪ್ರದೇಶಕ್ಕೆ ಕಳ್ಳಬಟ್ಟಿ ಕಳ್ಳಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮರಕ್ಕನಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಮರಕ್ಕನಂನ ವಿ ಅಮರನ್ (28) ಎಂಬಾತನನ್ನು ಬಂಧಿಸಿದ್ದು, ಆತನ ನಾಲ್ವರು ಸಹಚರರಾದ ಮುತ್ತು (31), ಆರುಮುಗಂ (42), ಮನ್ನಂಕಟ್ಟಿ (50) ಮತ್ತು ರವಿ (50) ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಾವಿನ ಕಾರಣವನ್ನು ತಿಳಿಯಲು ಪೊಲೀಸರು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಾವಿನಿಂದ ದುಃಖಿತನಾಗಿದ್ದೇನೆ ಮತ್ತು ಅಕ್ರಮ ಮದ್ಯ ಮಾರಾಟವನ್ನು ನಿರ್ಮೂಲನೆ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಮೃತರ ಕುಟುಂಬಕ್ಕೆ ₹ 10 ಲಕ್ಷ ಮತ್ತು ಆಸ್ಪತ್ರೆಗೆ ದಾಖಲಾದವರಿಗೆ 50,000 ರೂ. ಪರಿಹಾರ ಘೋಷಿಸಲಾಗಿದೆ. ಮರಕ್ಕನಂ ಇನ್ಸ್‌ಪೆಕ್ಟರ್ ಅರುಲ್ ವಡಿವಳಗನ್, ಸಬ್‌ಇನ್‌ಸ್ಪೆಕ್ಟರ್ ದೀಬನ್, ಕೊಟ್ಟಕುಪ್ಪಂ ನಿಷೇಧಾಜ್ಞೆ ಜಾರಿ ವಿಭಾಗದ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮರಿಯಾ ಸೋಫಿ ಮಂಜುಳಾ ಮತ್ತು ಸಬ್‌ಇನ್ಸ್‌ಪೆಕ್ಟರ್ ಶಿವಗುರುನಾಥನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಈಮಧ್ಯೆ, ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಕಂನಲ್ಲಿ ಒಂದೇ ವ್ಯಕ್ತಿಯಿಂದ ಖರೀದಿಸಿದ ಮದ್ಯ ಸೇವಿಸಿ ಶುಕ್ರವಾರ ಇಬ್ಬರು ಮತ್ತು ಶನಿವಾರ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಪೆರಂಬಕ್ಕಂ ಗ್ರಾಮ ಪಂಚಾಯತ್‌ನ ಇರುಲರ್ ಪ್ರದೇಶದ ನಿವಾಸಿಗಳಾದ ವೆನ್ನಿಯಪ್ಪನ್ (65) ಮತ್ತು ಅವರ ಪತ್ನಿ ಚಂದ್ರಾ (55) ಮತ್ತು ಪೆರುಕ್ಕರನೈ ಗ್ರಾಮದ ಚಿನ್ನತಂಬಿ ಮತ್ತು ಅವರ ಅತ್ತೆ ವಸಂತ ಎಂದು ಗುರುತಿಸಲಾಗಿದೆ.

ಮದ್ಯ ಸರಬರಾಜು ಮಾಡುತ್ತಿದ್ದ ಅಮ್ಮಾವಸಾಯಿ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೆನ್ನಿಯಪ್ಪನ್ ಮತ್ತು ಚಂದ್ರು ಶನಿವಾರ ಒಟ್ಟಿಗೆ ಮದ್ಯ ಸೇವಿಸಿದ್ದು, ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಪಕ್ಕದ ಗ್ರಾಮದಲ್ಲಿ ಚಿನ್ನತಂಬಿ, ಅವರ ಪತ್ನಿ ಅಂಜಲಾಯಿ ಮತ್ತು ಅತ್ತೆ ವಸಂತ ಶನಿವಾರ ಒಟ್ಟಿಗೆ ಕಳ್ಳಬಟ್ಟಿ ಸೇವಿಸಿದ್ದಾರೆ. ಮದ್ಯಪಾನ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಚಿನ್ನತಂಬಿ ಮತ್ತು ವಸಂತ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಅಂಜಲಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಅಮ್ಮವಸಾಯಿ ಮೃತರಿಗೆ ಕಳ್ಳಬಟ್ಟಿ ಮಾರಾಟ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮದ್ಯ ಸೇವಿಸಿದವರಿಗೆ ಕಂಡುಬಂದಿರುವ ರೋಗಲಕ್ಷಣಗಳು ಮೆಥನಾಲ್ ವಿಷವನ್ನು ಸೂಚಿಸುತ್ತವೆ. ಆದ್ದರಿಂದ ಅವರು ಮೆಥನಾಲ್ ಹೊಂದಿರುವ ಕಳ್ಳಬಟ್ಟಿಯನ್ನು ಸೇವಿಸಿದ್ದಾರೆ ಎಂದು ನಾವು ಅನುಮಾನಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com