ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗಳಿಗೇ ಆಮಂತ್ರಣವಿಲ್ಲ.. ಮೋದಿ ಸರ್ಕಾರದಿಂದ ಅಪಮಾನ: ಮಲ್ಲಿಕಾರ್ಜುನ ಖರ್ಗೆ ಕಿಡಿ
ನೂತನ ಸಂಸತ್ತ್ ಭವನ ಕಟ್ಟಡ ಉದ್ಘಾಟನೆಗೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗೌರವ ತೋರಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
Published: 22nd May 2023 02:29 PM | Last Updated: 22nd May 2023 03:13 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ನೂತನ ಸಂಸತ್ತ್ ಭವನ ಕಟ್ಟಡ ಉದ್ಘಾಟನೆಗೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗೌರವ ತೋರಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಔಚಿತ್ಯವನ್ನು ಟೋಕನಿಸಂಗೆ ಇಳಿಸಲಾಗಿದೆ ಎಂದು ಕಿಡಿಕಾರಿದ ಅವರು, ಮೋದಿ ಸರ್ಕಾರವು ಕೇವಲ ಚುನಾವಣಾ ಕಾರಣಗಳಿಗಾಗಿ ದಲಿತ ಮತ್ತು ಬುಡಕಟ್ಟು ಸಮುದಾಯಗಳಿಂದ ಭಾರತದ ರಾಷ್ಟ್ರಪತಿಗಳ ಆಯ್ಕೆಯನ್ನು ಮಾಡಿದಂತೆ ತೋರುತ್ತಿದೆ. ಬಿಜೆಪಿ-ಆರ್‌ಎಸ್‌ಎಸ್ ಸರ್ಕಾರದ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಔಚಿತ್ಯವನ್ನು ಪದೇ ಪದೇ ಟೋಕನಿಸಂಗೆ ಇಳಿಸುವ ಮೂಲಕ ಅಗೌರವ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇ 28ಕ್ಕೆ ಪ್ರಧಾನಿ ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆ
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, 'ದೇಶದ ಪ್ರಥಮ ಪ್ರಜೆಯೂ ಆಗಿರುವ ರಾಷ್ಟ್ರಪತಿಗಳು ಭಾರತದ ಅತ್ಯುನ್ನತ ಶಾಸಕಾಂಗದ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಔಚಿತ್ಯಕ್ಕೆ ಸರ್ಕಾರದ ಬದ್ಧತೆಯನ್ನು ಸಂಕೇತಿಸುವ ಹೊಸ ಕಟ್ಟಡವನ್ನು ಅವರು ಉದ್ಘಾಟಿಸಬೇಕು. ಮಾಜಿ ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂಡ್ ಅವರನ್ನು ಹೊಸ ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೂ ಆಹ್ವಾನ ನೀಡಲಾಗಿರಲಿಲ್ಲ. ಈಗ ಭಾರತದ ರಾಷ್ಟ್ರಪತಿಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಹೊಸ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನ ನೀಡಲಾಗಿಲ್ಲ ಎಂದು ಖರ್ಗೆ ಬರೆದಿದ್ದಾರೆ.
The President of India Smt. Droupadi Murmu is not being invited for the inauguration of the new Parliament Building.
— Mallikarjun Kharge (@kharge) May 22, 2023
The Parliament of India is the supreme legislative body of the Republic of India, and the President of India is its highest Constitutional authority.
2/4
"ಭಾರತದ ಸಂಸತ್ತು ಭಾರತ ಗಣರಾಜ್ಯದ ಸರ್ವೋಚ್ಚ ಶಾಸಕಾಂಗ ಸಂಸ್ಥೆಯಾಗಿದೆ ಮತ್ತು ಭಾರತದ ರಾಷ್ಟ್ರಪತಿಗಳು ಅದರ ಅತ್ಯುನ್ನತ ಸಾಂವಿಧಾನಿಕ ಅಧಿಕಾರವಾಗಿದೆ. ಅವರು ಮಾತ್ರವೇ ಸರ್ಕಾರ, ವಿರೋಧ ಪಕ್ಷ ಹಾಗೂ ಪ್ರತಿ ನಾಗರೀಕರನ್ನು ಪ್ರತಿನಿಧಿಸುತ್ತಾರೆ. ಅವರು ಭಾರತದ ಪ್ರಥಮ ಪ್ರಜೆ. ಅವರು ನೂತನ ಸಂಸತ್ ಭವನದ ಉದ್ಘಾಟನೆಯು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಔಚಿತ್ಯಕ್ಕೆ ಸರ್ಕಾರದ ಬದ್ಧತೆಯನ್ನು ಸಂಕೇತಿಸುತ್ತದೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ಹೊಸ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕು, ಪ್ರಧಾನಿ ಮೋದಿ ಅಲ್ಲ: ರಾಹುಲ್ ಗಾಂಧಿ
ಇನ್ನು ಸಂಸತ್ ಭವನ ಉದ್ಘಾಟನೆ ವಿಚಾರವಾಗಿ ಲೋಕಸಭೆಯ ಸಚಿವಾಲಯ ಮಾಹಿತಿ ನೀಡಿದ್ದು, 'ವೀರ್ ಸಾವರ್ಕರ್ ಅವರ ಜನ್ಮದಿನವಾದ ಮೇ 28 ರಂದು 64,500 ಚದರ ಮೀಟರ್ ವಿಸ್ತೀರ್ಣದ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರು ಕಳೆದ ವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದರು ಎಂದು ತಿಳಿಸಿದೆ.
The Modi Govt has repeatedly disrespected propriety.
— Mallikarjun Kharge (@kharge) May 22, 2023
The Office of the President of India is reduced to tokenism under the BJP-RSS Government.
4/4
ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ಕಿಡಿ
ಇನ್ನು ಕಾಂಗ್ರೆಸ್‌ನ ರಾಹುಲ್ ಗಾಂಧಿ, ಎಐಎಂಐಎಂನ ಅಸಾದುದ್ದೀನ್ ಓವೈಸಿ, ತೃಣಮೂಲ ಕಾಂಗ್ರೆಸ್‌ನ ಸುಖೇಂದು ಶೇಖರ್ ರೇ, ಸಿಪಿಐನ ಡಿ ರಾಜಾ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು, ಪ್ರಧಾನಿ ಮೋದಿ ಅವರು ಸರ್ಕಾರದ ಮುಖ್ಯಸ್ಥರೇ ಹೊರತು ಶಾಸಕಾಂಗದ ಮುಖ್ಯಸ್ಥರಲ್ಲ ಎಂದು ಉಲ್ಲೇಖಿಸಿ ಪ್ರಧಾನಿ ಮೋದಿ ಸಂಕೀರ್ಣವನ್ನು ಉದ್ಘಾಟಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಉದ್ಘಾಟಿಸಬೇಕು ಎಂದು ಆಗ್ರಹಿಸಿದ್ದಾರೆ.