ಯುಪಿಯಲ್ಲಿ ಬಿಡಾಡಿ ಗೂಳಿ ದಾಳಿಗೆ ಯೋಧ ಬಲಿ, ಕುಟುಂಬ ಚಿಂತಾಜನಕ
ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಬವನ್‌ಖೇಡಿ ಗ್ರಾಮದ ಹಸನ್‌ಪುರ ಅತ್ರಾಸಿ ರಸ್ತೆಯಲ್ಲಿ ಬಿಡಾಡಿ ಗೂಳಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಸೇನಾ ಯೋಧರೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ.
Published: 30th May 2023 11:40 AM | Last Updated: 30th May 2023 02:05 PM | A+A A-

ಸಾಂದರ್ಭಿಕ ಚಿತ್ರ
ಪಿಲಿಭಿತ್: ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಬವನ್‌ಖೇಡಿ ಗ್ರಾಮದ ಹಸನ್‌ಪುರ ಅತ್ರಾಸಿ ರಸ್ತೆಯಲ್ಲಿ ಬಿಡಾಡಿ ಗೂಳಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಸೇನಾ ಯೋಧರೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ.
ಮೃತ ಯೋಧ ಅಂಕಿತ್ ಕುಮಾರ್ (28) ಪಂಜಾಬ್‌ನ ಫಿರೋಜ್‌ಪುರದ 507 ಎಎಸ್‌ಸಿ ಬೆಟಾಲಿಯನ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಮಂಗಳವಾರ ನಿಗದಿಯಾಗಿದ್ದ ಸ್ನೇಹಿತರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ಭಾನುವಾರ ರಜೆಯ ಮೇಲೆ ಅಮ್ರೋಹಾಕ್ಕೆ ಬಂದಿದ್ದರು. ಗೂಳಿಯ ಕೊಂಬು ಹೊಟ್ಟೆಗೆ ಚುಚ್ಚಿದ್ದರಿಂದ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತ್ನಿ ಸೋನಂ (25) ಮತ್ತು ಅವರ ಇಬ್ಬರು ಮಕ್ಕಳಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೂಳಿಯನ್ನು ಹಿಡಿದು ಗೋಶಾಲೆಗೆ ಕಳುಹಿಸುತ್ತೇವೆ ಎಂದು ಹಸನಪುರ ಎಸ್‌ಎಚ್‌ಒ ಸುಶೀಲ್ ವರ್ಮಾ ಹೇಳಿದ್ದಾರೆ. ಪಿಲಿಭಿತ್‌ನಲ್ಲಿ ನಡೆದ ಇಂತಹ ಮತ್ತೊಂದು ಘಟನೆಯಲ್ಲಿ ಬಂಟಿ ಲೋಧಿ ಎಂದು ಗುರುತಿಸಲಾದ 24 ವರ್ಷದ ಯುವಕನೋರ್ವ ಮನೆಗೆ ಹೋಗುತ್ತಿದ್ದಾಗ ಬಿಡಾಡಿ ಗೂಳಿ ದಾಳಿ ಮಾಡಿತ್ತು. ನಂತರ ಅವರು ಕೂಡಾ ಸಾವನ್ನಪ್ಪಿದ್ದರು.