ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದ್ದು, ಈ ಸಂಬಂಧ ಕೃಷ್ಣ ಕುಮಾರ್ ರಘುವಂಶಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ರಜಾಕಾಲದ ಪೀಠವು, ಈ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಇಷ್ಟಪಡುವುದಿಲ್ಲ ಎಂದು ಹೇಳಿ, ಮನವಿಯನ್ನು ತಿರಸ್ಕರಿಸಿತು. 

‘ಸಾಮಾಜಿಕ ಮಾಧ್ಯಮಗಳ ಮೂಲಕ ಯಾರೊಬ್ಬರೂ ನ್ಯಾಯಾಧೀಶರನ್ನು ದೂಷಣೆ ಮಾಡುವಂತಿಲ್ಲ ಅಥವಾ ಅಪವಾದ ಹೊರಿಸುವಂತಿಲ್ಲ. ನಿಮ್ಮ ಪರ ತೀರ್ಪು ಬಾರದಿದ್ದಾಗ ನೀವು ನ್ಯಾಯಾಧೀಶರನ್ನು ದೂಷಿಸಬಹುದು ಎಂದರ್ಥವಲ್ಲ. ನ್ಯಾಯಾಂಗದ ಸ್ವಾತಂತ್ರ್ಯವೆಂದರೆ ಕೇವಲ ಕಾರ್ಯಾಂಗದಿಂದ ಸ್ವತಂತ್ರವಾಗಿರುವುದಲ್ಲ. ಹೊರಗಿನ ಶಕ್ತಿಗಳಿಂದಲೂ ಸ್ವತಂತ್ರವಾಗಿರುವುದಾಗಿದೆ. ಇದು ಇತರರಿಗೆ ಪಾಠವಾಗಬೇಕು’ ಎಂದು ಪೀಠ ಎಚ್ಚರಿಸಿದೆ.

‘ಅರ್ಜಿದಾರರು ನ್ಯಾಯಾಧೀಶರನ್ನು ದೂಷಿಸಿದ್ದಾರೆ. ನ್ಯಾಯಾಧೀಶರ ಮೇಲೆ ಆರೋಪ ಹೊರಿಸುವ ಮೊದಲು ಅವರು ಎರಡು ಬಾರಿ ಯೋಚಿಸಬೇಕಿತ್ತು. ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಆದ ಹಾನಿ ಬಗ್ಗೆಯೂ ಅವರು ಯೋಚಿಸಬೇಕಿತ್ತು’ ಎಂದು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಮೌಖಿಕವಾಗಿ ಹೇಳಿದರು.

ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರು ಮೇ 27ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ಶಿಕ್ಷೆ ಅವಧಿ ವಿಪರೀತವಾಯಿತು’ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ನಾವು ಇಲ್ಲಿರುವುದು ಸರಿ ತಪ್ಪುಗಳನ್ನು ನಿರ್ಧರಿಸುವುದಕ್ಕೇ ಹೊರತು ಇಂತಹ ವ್ಯಕ್ತಿಗಳಿಗೆ ಕರುಣೆ ತೋರುವುದಕ್ಕಲ್ಲ’ ಎಂದು ಪೀಠ ಖಾರವಾಗಿ ಹೇಳಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com