ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ್ದು, ಕೆನಡಾ ಆರೋಪ ಸಂಬಂಧ ಭಾರತ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಹಿರಿಯ ಪತ್ರಕರ್ತ ಲಿಯೋನೆಲ್ ಬಾರ್ಬರ್ ಅವರೊಂದಿಗೆ ‘ಒಂದು ಬಿಲಿಯನ್ ಜನರು ಜಗತ್ತನ್ನು ಹೇಗೆ ನೋಡುತ್ತಾರೆ’ ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಐದು ದಿನಗಳ ಅಧಿಕೃತ ಭೇಟಿಗಾಗಿ ಬ್ರಿಟನ್'ಗೆ ಜೈಶಂಕರ್ ಅವರು ತೆರಳಿದ್ದು, ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕೆನಡಾ ಆರೋಪ ಕುರಿತು ಸ್ಪಷ್ಟನೆ ನೀಡಿದ್ದಾರೆ.
‘ನೀವು ಅಂತಹ ಆರೋಪ ಮಾಡಲು ನಿಖರ ಕಾರಣವಿದ್ದರೆ ದಯವಿಟ್ಟು ಸಾಕ್ಷ್ಯವನ್ನು ಹಂಚಿಕೊಳ್ಳಿ ಏಕೆಂದರೆ ನಾವು ತನಿಖೆಯನ್ನು ನಿರಾಕರಿಸುತ್ತಿಲ್ಲ’ ಆದರೆ ಕೆನಡಾ ತನ್ನ ಆರೋಪವನ್ನು ಬೆಂಬಲಿಸಲು ಭಾರತದೊಂದಿಗೆ ಯಾವುದೇ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದರು.
ಇದೇ ವೇಳೆ ಕೆನಡಾದಲ್ಲಿನ ಖಲಿಸ್ತಾನ್ ಪರ ಚಟುವಟಿಕೆಗಳನ್ನು ಉಲ್ಲೇಖಿಸಿದ ಜೈಶಂಕರ್ ಅವರು,, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಒಂದು ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಬರುತ್ತದೆ ಮತ್ತು ಆ ಸ್ವಾತಂತ್ರ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗವನ್ನು ಸಹಿಸಿಕೊಳ್ಳುವುದು ತುಂಬಾ ತಪ್ಪು ಎಂದು ಹೇಳಿದರು.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತ ತನಿಖೆಗೆ ಭಾರತ ಸಹಕರಿಸುತ್ತದೆ. ಆದರೆ, ಭಾರತದ ವಿರುದ್ಧ ಕೆನಡಾ ಮಾಡಿದ ಆರೋಪಗಳಿಗೆ ಮೊದಲು ಸಾಕ್ಷ್ಯ ಕೊಡಲಿ” ಎಂದು ಆಗ್ರಹಿಸಿದರು.
“ಭಾರತದ ವಿರುದ್ಧ ಕೆನಡಾ ಗಂಭೀರ ಆರೋಪಗಳನ್ನು ಮಾಡಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದೆ. ಕೆನಡಾ ಆರೋಪಗಳ ಕುರಿತ ತನಿಖೆಗೆ ಭಾರತ ಸಿದ್ಧವಾಗಿದೆ. ನಾವು ತನಿಖೆಯಿಂದ ದೂರ ಸರಿಯುವ, ಸಹಕರಿಸದಿರುವ ಮಾತೇ ಇಲ್ಲ. ಆದರೆ, ನಾವು ಕೆನಡಾ ಸರ್ಕಾರಕ್ಕೆ ಸಾಕ್ಷ್ಯ ಕೊಡಿ ಎಂದು ಮಾತ್ರ ಕೇಳಿದ್ದೇವೆ. ಸಾಕ್ಷ್ಯವಿಲ್ಲದೆ ತನಿಖೆ ನಡೆಯುವುದು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಭಾರತದ ಹೈಕಮಿಷನ್ ಮೇಲೆ ದಾಳಿ ನಡೆಸಲಾಗುತ್ತಿದೆ. ಹೀಗಿರುವಾಗ ಸಹಜವಾಗಿಯೇ ಭಾರತವು ಕ್ರಮಕ್ಕೆ ಆಗ್ರಹಿಸುತ್ತದೆ. ಆದರೆ, ಕೆನಡಾ ರಾಜಕೀಯದಲ್ಲಿ ಹಿಂಸಾತ್ಮಕ ಮನೋಭಾವದ ವ್ಯಕ್ತಿಗಳು ಬಂದು ಸೇರಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದರು.
ಬಳಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ಜೈಶಂಕರ್, “ಅಭಿವ್ಯಕ್ತಿ ಸ್ವಾತಂತ್ರ್ಯವು ಜವಾಬ್ದಾರಿಯುತವಾಗಿ ಇರಬೇಕೇ ಹೊರತು, ಹುರುಳಿಲ್ಲದ ಆರೋಪಗಳು ಆಗಬಾರದು” ಎಂದು ತಿರುಗೇಟು ನೀಡಿದರು.
ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು.
ಕೆನಡಾ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು. ಆದಾಗ್ಯೂ, ಭಾರತವು ಕೆನಡಾ ರಾಜತಾಂತ್ರಿಕರನ್ನು ದೇಶದಿಂದ ವಾಪಸ್ ಕಳುಹಿಸಿದೆ.
Advertisement