ಗಡಿ ಮೂಲಸೌಕರ್ಯದಲ್ಲಿ ಭಾರತ ಚೀನಾವನ್ನು 4-5 ವರ್ಷಗಳಲ್ಲಿ ಹಿಂದಿಕ್ಕಲಿದೆ: ಬಿಆರ್ ಒ ಮುಖ್ಯಸ್ಥ
ಭಾರತ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಳೆದ 3 ವರ್ಷಗಳಲ್ಲಿ ವೇಗವಾಗಿ ಕೆಲಸಗಳಾಗುತ್ತಿವೆ ಎಂದು ಗಡಿ ರಸ್ತೆಗಳ ಸಂಸ್ಥೆ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಹೇಳಿದ್ದಾರೆ.
Published: 25th September 2023 12:13 AM | Last Updated: 25th September 2023 08:17 PM | A+A A-

ಮೂಲಸೌಕರ್ಯ ಕಾಮಗಾರಿ
ನವದೆಹಲಿ: ಭಾರತ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಳೆದ 3 ವರ್ಷಗಳಲ್ಲಿ ವೇಗವಾಗಿ ಕೆಲಸಗಳಾಗುತ್ತಿವೆ ಎಂದು ಗಡಿ ರಸ್ತೆಗಳ ಸಂಸ್ಥೆ (ಬಿಆರ್ ಒ) ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಹೇಳಿದ್ದಾರೆ.
ಜಗತ್ತಿನ ಅತಿ ದೊಡ್ಡ 3 ಡಿ ಕಾಂಕ್ರಿಟ್ ಪ್ರಿಂಟೆಡ್ ಕ್ಯಾಂಪಸ್ ಎಂದೇ ಖ್ಯಾತಿ ಪಡೆದಿರುವ ಬಿಆರ್ ಒದ ಏರ್ ಡಿಸ್ಪಾಚ್ ಯುನಿಟ್ ನ ಕಾಮಗಾರಿ ಪರಿಶೀಲನೆಗಾಗಿ ಚಂಡೀಗಢಕ್ಕೆ ಆಗಮಿಸಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಹೊಸ ತಂತ್ರಜ್ಞಾನ ಹಾಗೂ ಬಜೆಟ್ ನ್ನು ಹೆಚ್ಚಿಸುವ ಮೂಲಕ ಗಡಿ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಆರ್ ಒ ಗೆ ಭಾರತ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರಿ': ಮ್ಯಾಪ್ ವಿವಾದದ ನಡುವೆಯೇ ಚೀನಾಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ
ಕಳೆದ 2 ವರ್ಷಗಳಲ್ಲಿ ಭಾರತ ಸರ್ಕಾರ ಬಜೆಟ್ ನ್ನು ಶೇ.100 ರಷ್ಟು ಹೆಚ್ಚಿಸಿದೆ, ಕಳೆದ ಕೆಲವು ವರ್ಷಗಳಲ್ಲಿ 8,000 ಕೋಟಿ ರೂಪಾಯಿ ಮೌಲ್ಯದ 300 ಬಿಆರ್ ಒ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಡಿಜಿ ಹೇಳಿದ್ದಾರೆ.
"ಕಳೆದ ಮೂರು ವರ್ಷಗಳಲ್ಲಿ, ನಾವು 295 ರಸ್ತೆ ಯೋಜನೆಗಳು, ಸೇತುವೆಗಳು, ಸುರಂಗಗಳು ಮತ್ತು ವಿಮಾನ ನಿಲ್ದಾಣಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದೇವೆ" ಎಂದು ಚೌಧರಿ ಹೇಳಿದ್ದಾರೆ.
ಇನ್ನು 4 ತಿಂಗಳಲ್ಲಿ 60 ಕ್ಕೂ ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ, ಇನ್ನು 4-5 ವರ್ಷಗಳಲ್ಲಿ ಗಡಿ ಮೂಲಸೌಕರ್ಯದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಚೌಧರಿ ವಿಶ್ವಾಸ ವ್ಯಕ್ತಪಾಡಿಸಿದ್ದಾರೆ.