ಬಿಜೆಪಿ ಸೇರದಿದ್ದರೆ ED ತನ್ನನ್ನು ಸೇರಿ ಇತರ 3 AAP ನಾಯಕರನ್ನು ಬಂಧಿಸಲಿದೆ: ದೆಹಲಿ ಸಚಿವೆ ಅತಿಶಿ

ಬಿಜೆಪಿ ಸೇರುವಂತೆ ನನ್ನ ಆಪ್ತರ ಮೂಲಕ ನನ್ನನ್ನು ಸಂಪರ್ಕಿಸಲಾಗಿದ್ದು, ಬಿಜೆಪಿಗೆ ಸೇರದೆ ಹೋದರೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರೊಂದಿಗೆ ನನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಸಚಿವೆ ಅತಿಶಿ ಮಂಗಳವಾರ ಹೇಳಿದ್ದಾರೆ.
ದೆಹಲಿ ಸಚಿವೆ ಅತಿಶಿ
ದೆಹಲಿ ಸಚಿವೆ ಅತಿಶಿ

ನವದೆಹಲಿ: ಬಿಜೆಪಿ ಸೇರುವಂತೆ ಆಪ್ತರ ಮೂಲಕ ನನ್ನನ್ನು ಸಂಪರ್ಕಿಸಲಾಗಿದ್ದು, ಬಿಜೆಪಿಗೆ ಸೇರದೆ ಹೋದರೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರೊಂದಿಗೆ ನನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಸಚಿವೆ ಅತಿಶಿ ಮಂಗಳವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ನಾಯಕರನ್ನು ಬಿಜೆಪಿ ಗುರಿಯಾಗಿಸುತ್ತಿದೆ. ಆಪ್ತರ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿತ್ತು. ಈ ವೇಳೆ ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಿಜೆಪಿಗೆ ಸೇರಬಹುದು ಅಥವಾ ಮುಂದಿನ ತಿಂಗಳೊಳಗೆ ಬಂಧನಕ್ಕೀಡಾಗಬಹುದು. ಪ್ರತಿಯೊಬ್ಬ ಆಪ್ ನಾಯಕರನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಆಪ್ತರೊಬ್ಬರು ತಿಳಿಸಿದ್ದಾಗಿ ಹೇಳಿದರು.

ಈಗಾಗಲೇ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ಅವರೊಂದಿಗೆ ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ನನ್ನನ್ನೂ ಬಂಧಿಸಲು ಉದ್ದೇಶಿಸಲಾಗಿದೆ ಎಂದು ದೂರಿದ್ದಾರೆ.

ಮುಂದಿನ ದಿನಗಳಲ್ಲಿ ಇ.ಡಿ ತಮ್ಮ ನಿವಾಸ ಮತ್ತು ಸಂಬಂಧಿಕರ ಮೇಲೆ ದಾಳಿ ನಡೆಸಲಿದೆ ಎಂದು ತಿಳಿಸಲಾಗಿದೆ. ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ರ್ಯಾಲಿಯ ಯಶಸ್ಸಿನಿಂದ ಬಿಜೆಪಿ ಜರ್ಜರಿತವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುವುದರಿಂದ ಎಎಪಿ ವಿಘಟನೆಗೆ ಕಾರಣವಾಗುವುದಿಲ್ಲ ಎಂದು ಅವರು ಅರಿತುಕೊಂಡಿದ್ದಾರೆ ಎಂದು ಅವರು ಹೇಳಿದರು.

ದೆಹಲಿ ಸಚಿವೆ ಅತಿಶಿ
ED ವಿಚಾರಣೆ ವೇಳೆ ಅತಿಶಿ, ಸೌರಭ್ ಭಾರದ್ವಾಜ್ ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್!

'ನಾವು ನಿಮಗೆ ಹೆದರುವುದಿಲ್ಲ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ, ನಾವು ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು, ನಾವು ಭಗತ್ ಸಿಂಗ್ ಅವರ ಹಿಂಬಾಲಕರು. ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವದಲ್ಲಿ ನಾವು ಸಂವಿಧಾನವನ್ನು ಉಳಿಸುವುದನ್ನು ಮುಂದುವರಿಸುತ್ತೇವೆ ಮತ್ತು ಜನರಿಗೆ ಉತ್ತಮ ಜೀವನವನ್ನು ಕಟ್ಟಿಕೊಡಲು ಶ್ರಮಿಸುತ್ತೇವೆ' ಎಂದು ಅವರು ಹೇಳಿದರು.

ಭಾರದ್ವಾಜ್ ಮಾತನಾಡಿ, ಅತಿಶಿ ಅವರಿಗೆ ಬಿಜೆಪಿಗೆ ಸೇರುವಂತೆ ಅಥವಾ ಬಂಧನವನ್ನು ಎದುರಿಸುವುದಾಗಿ ಹೇಳಿರುವುದು ಬಹಿರಂಗ ಬೆದರಿಕೆಯಾಗಿದೆ. ಕೇಜ್ರಿವಾಲ್ ಸೇರಿದಂತೆ ನಾಲ್ವರು ನಾಯಕರ ಬಂಧನದ ಹೊರತಾಗಿಯೂ, ಎಎಪಿ ಉಳಿದುಕೊಂಡಿದೆ. ಹಾಗಾಗಿ ಈಗ ಅವರು ಇತರ ನಾಯಕರನ್ನು (ಜೈಲಿಗೆ) ಕಳುಹಿಸಲು ಬಯಸಿದ್ದಾರೆ. ಮೊದಲನೆಯದು ನಾನು, ನಂತರ ಅತಿಶಿ ಮತ್ತು ನಂತರ ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಆಗಿದ್ದಾರೆ. ಎಎಪಿ ಸಾವಯವ ಬೆಳವಣಿಗೆಯನ್ನು ಹೊಂದಿದೆ ಮತ್ತು ಬಿಜೆಪಿಯು ಎಎಪಿಯ ಪ್ರಮುಖ ನಾಯಕನ ಬಂಧನದಿಂದ ಪಕ್ಷವು ಇಬ್ಭಾಗವಾಗುತ್ತದೆ ಎಂಬ ಭ್ರಮೆಯಲ್ಲಿರಬಾರದು ಎಂದರು.

ಎಎಪಿ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಬಯಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಎಎಪಿ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಮುಖ್ಯಸ್ಥ, 'ಅಬಕಾರಿ ನೀತಿ ಪ್ರಕರಣದ ಆರೋಪಿ ಮತ್ತು ಜೈಲಿನಲ್ಲಿರುವ ಎಎಪಿ ನಾಯಕ ವಿಜಯ್ ನಾಯರ್ ಅವರು ಅತಿಶಿ ಮತ್ತು ಭಾರದ್ವಾಜ್ ಅವರಿಗೆ ವರದಿ ಮಾಡುತ್ತಿದ್ದರು ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರಿಂದ, ಎಎಪಿ ನಾಯಕರು ಈಗ ಜಗಳವಾಡುತ್ತಿದ್ದಾರೆ. ಅತಿಶಿ ತಾವು ಬಚಾವಾಗಲು ಚಡ್ಡಾ ಮತ್ತು ಪಾಠಕ್ ಅನ್ನು ತೊಂದರೆಗೆ ಸಿಲುಕಿಸಿದ್ದಾರೆ' ಎಂದರು.

ನಾಯರ್ ಅವರು ಒಂದೂವರೆ ವರ್ಷಗಳ ಹಿಂದೆ ತಮ್ಮ ಹೇಳಿಕೆಯನ್ನು ನೀಡಿದ್ದರು ಮತ್ತು ಬಿಜೆಪಿ ನಾಯಕರು ಈಗ ಅದನ್ನು ಬಳಸುತ್ತಿದ್ದಾರೆ. ಇದು ಪಕ್ಷದ ಅಸಂಬದ್ಧ ರಾಜಕೀಯ ತಂತ್ರವನ್ನು ತೋರಿಸುತ್ತದೆ ಎಂದು ಭಾರದ್ವಾಜ್ ಹೇಳಿದರು.

ನ್ಯಾಯಾಲಯದಲ್ಲಿ ತಮ್ಮ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರನ್ನು ಉಲ್ಲೇಖಿಸಿರುವ ಇ.ಡಿ ಹೇಳಿಕೆ ಬಗ್ಗೆ ಕೇಳಿದಾಗ ಉತ್ತರಿಸಿದ ಅತಿಶಿ, 'ಒಂದೂವರೆ ವರ್ಷಗಳಿಂದ ಇ.ಡಿ ಮತ್ತು ಸಿಬಿಐನಲ್ಲಿ ಲಭ್ಯವಿರುವ ಹೇಳಿಕೆಯ ಆಧಾರದ ಮೇಲೆ ಇ.ಡಿ ಸೌರಭ್ ಭಾರದ್ವಾಜ್ ಮತ್ತು ನನ್ನ ಹೆಸರನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಿದೆ. ಈ ಹೇಳಿಕೆ ಇಡಿ ಚಾರ್ಜ್ ಶೀಟ್‌ನಲ್ಲಿದೆ, ಈ ಹೇಳಿಕೆ ಸಿಬಿಐನ ಚಾರ್ಜ್ ಶೀಟ್‌ಗಳಲ್ಲಿಯೂ ಇದೆ, ಹಾಗಾದರೆ ಈ ಹೇಳಿಕೆಯನ್ನು ಈಗ ಎತ್ತಲು ಕಾರಣವೇನು? ಎಂದು ಪ್ರಶ್ನಿಸಿದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇ.ಡಿ ಬಂಧಿಸಿದ್ದು, ಸೋಮವಾರ ನ್ಯಾಯಾಲಯವು ಏಪ್ರಿಲ್ 15 ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದೆಹಲಿ ಸಚಿವೆ ಅತಿಶಿ
ಕೇಜ್ರಿವಾಲ್ ಫೋನ್‌ನಿಂದ AAP ಲೋಕಸಭಾ ಚುನಾವಣೆ ಕಾರ್ಯತಂತ್ರದ ವಿವರ ಪಡೆಯಲು ED ಯತ್ನ: ಅತಿಶಿ ಆರೋಪ

ಬಿಜೆಪಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ಬೇಟೆಯಾಡಿ, ಪಕ್ಷವನ್ನು ಒಡೆಯುವ ಮೂಲಕ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಯಸುತ್ತಿದೆ ಎಂದು ಎಎಪಿ ಆರೋಪಿಸಿದೆ.

ಎಎಪಿಯ ಕಿರಾರಿ ಶಾಸಕ ರಿತುರಾಜ್ ಝಾ ಅವರು ಕೇಸರಿ ಪಕ್ಷಕ್ಕೆ ಸೇರಲು 25 ಕೋಟಿ ರೂ. ಆಮಿಷವೊಡ್ಡಲಾಯಿತು ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com