ನವದೆಹಲಿ: ಕೇಸರಿ ಪಕ್ಷವನ್ನು ಸೇರುವಂತೆ ತನ್ನನ್ನು ಆಪ್ತ ವ್ಯಕ್ತಿಯ ಮೂಲಕ ಸಂಪರ್ಕಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಘಟಕವು ಹಿರಿಯ ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.
ಬಿಜೆಪಿ ಸೇರುವಂತೆ ಆಪ್ತರ ಮೂಲಕ ನನ್ನನ್ನು ಸಂಪರ್ಕಿಸಲಾಗಿದ್ದು, ಬಿಜೆಪಿಗೆ ಸೇರದೆ ಹೋದರೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರೊಂದಿಗೆ ನನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಸಚಿವೆ ಅತಿಶಿ ಮಂಗಳವಾರ ಆರೋಪಿಸಿದ್ದರು.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಅವರ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
'ಅತಿಶಿ ತಮ್ಮನ್ನು ಯಾರು, ಹೇಗೆ ಮತ್ತು ಯಾವಾಗ ಸಂಪರ್ಕಿಸಿದರು ಎಂಬುದಕ್ಕೆ ಪುರಾವೆಗಳನ್ನು ಒದಗಿಸಲು ವಿಫಲರಾಗಿದ್ದಾರೆ. ದೆಹಲಿಯಲ್ಲಿ ಎಎಪಿ ಬಿಕ್ಕಟ್ಟಿಗೆ ಒಳಗಾಗಿದೆ. ಅದಕ್ಕಾಗಿಯೇ ಅವರು ಹತಾಶೆಯಿಂದ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ನಾವು ಅವರನ್ನು ಇದರಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ' ಎಂದು ಅವರು ಹೇಳಿದರು.
ಅತಿಶಿ ಅವರು ತಮ್ಮ ಹೇಳಿಕೆ ನಿಜವೆಂದು ಸಾಬೀತುಪಡಿಸಲು ತಮ್ಮ ಫೋನ್ ಅನ್ನು ತನಿಖಾ ಸಂಸ್ಥೆಗೆ ಸಲ್ಲಿಸುವಂತೆ ಒತ್ತಾಯಿಸಿದರು.
'ಸುಳ್ಳು, ಮಾನಹಾನಿಕರ ಮತ್ತು ಕಪೋಲಕಲ್ಪಿತ'ವಾದ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಅತಿಶಿ ಅವರಿಗೆ ಪಕ್ಷವು ಮಾನನಷ್ಟ ನೋಟಿಸ್ ಕಳುಹಿಸಿದೆ ಮತ್ತು ಕೆಟ್ಟ ಉದ್ದೇಶದಿಂದ ಬಿಜೆಪಿ ವಿರುದ್ಧ ಇಂತಹ ಆರೋಪಗಳನ್ನು ಮಾಡಲಾಗಿದೆ. ಅತಿಶಿ ಅವರು ತಮ್ಮ ಹೇಳಿಕೆಗಳ್ನು ಸಮರ್ಥಿಸಲು ವಿಫಲವಾದರೆ ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಬಿಜೆಪಿಯ ವಕೀಲರು ಹೇಳಿದ್ದಾರೆ.
Advertisement