ಬಾಂಗ್ಲಾ ದಂಗೆ: ಹಿಂದೂಗಳ ಮೇಲೆ ಹಲ್ಲೆ ಆತಂಕಕಾರಿ, ಭಾರತೀಯ ಸಮುದಾಯದೊಂದಿಗೆ ಕೇಂದ್ರ ನಿಕಟ ಸಂಪರ್ಕದಲ್ಲಿದೆ- ಜೈಶಂಕರ್

ದೇಶದಿಂದ 12,000-13,000 ಭಾರತೀಯರನ್ನು ಸ್ಥಳಾಂತರಿಸುವ ಅಗತ್ಯವಿದೆ. ಅಲ್ಲಿ 20 ಸಾವಿರ ಭಾರತೀಯ ಪ್ರಜೆಗಳಿದ್ದರು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಈ ಪೈಕಿ ಸುಮಾರು 8 ಸಾವಿರ ಭಾರತೀಯರು ವಾಪಸಾಗಿದ್ದಾರೆ.
ಎಸ್. ಜೈಶಂಕರ್
ಎಸ್. ಜೈಶಂಕರ್TNIE
Updated on

ನವದೆಹಲಿ: ನೆರೆಯ ರಾಷ್ಟ್ರ ಬಾಂಗ್ಲಾದೇಶ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಾರತ ಸರ್ಕಾರವೂ ಅಲ್ಲಿನ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದೆ. ಮಂಗಳವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಜನರು ಬೀದಿಗಿಳಿದಿದ್ದು ಹಿಂಸಾಚಾರ ನಡೆಸುತ್ತಿದ್ದಾರೆ. ಅಲ್ಲದೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಹಿಂದೂಗಳನ್ನು ಗುರಿಯಾಗಿಸಲಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದರು. ಅಲ್ಪಸಂಖ್ಯಾತರ ಸ್ಥಿತಿಗತಿಗಳ ಮೇಲೆ ನಿಗಾ ಇಡಲಾಗಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದು, ಪರಿಸ್ಥಿತಿ ಹದಗೆಟ್ಟಿದೆ. ರಾಜೀನಾಮೆ ನಂತರ ಶೇಖ್ ಹಸೀನಾ ಅವರು ಭಾರತಕ್ಕೆ ಬರಲು ಅನುಮತಿ ಕೋರಿದ್ದರು ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು. ಈ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿ, ಬಾಂಗ್ಲಾದೇಶದ ಪರಿಸ್ಥಿತಿ ಅಷ್ಟು ಭೀಕರವಾಗಿಲ್ಲ, ಹಿಂಸಾಚಾರ ಪೀಡಿತ ದೇಶದಿಂದ 12,000-13,000 ಭಾರತೀಯರನ್ನು ಸ್ಥಳಾಂತರಿಸುವ ಅಗತ್ಯವಿದೆ. ಅಲ್ಲಿ 20 ಸಾವಿರ ಭಾರತೀಯ ಪ್ರಜೆಗಳಿದ್ದರು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಈ ಪೈಕಿ ಸುಮಾರು 8 ಸಾವಿರ ಭಾರತೀಯರು ವಾಪಸಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಉದ್ಭವಿಸುವ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಎಸ್ ಜೈಶಂಕರ್ ಹೇಳಿದ್ದಾರೆ. ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಭಾಗಿಯಾಗಿದ್ದವು. ಆದರೆ, ತಮ್ಮನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಎಎಪಿ ಹೇಳಿಕೊಂಡಿದೆ.

ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಜುಲೈನಿಂದ ಹಿಂಸಾಚಾರ ನಡೆಯುತ್ತಿದೆ. ಜುಲೈ 21ರಂದು ಸುಪ್ರೀಂ ಕೋರ್ಟ್ ಅಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತು. ಆದರೂ ಪ್ರತಿಭಟನೆ ಮುಂದುವರಿದಿತ್ತು. ಆಗಸ್ಟ್ 4ರಂದು ಪರಿಸ್ಥಿತಿ ಹದಗೆಟ್ಟಿತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದೆ. ಆಗಸ್ಟ್ 5ರಂದು ಕರ್ಫ್ಯೂ ವಿಧಿಸಲಾಯಿತು. ಆದರೂ ಬೀದಿಗಿಳಿದು ಮೆರವಣಿಗೆ ನಡೆಸಲಾಯಿತು. ಸೇನಾ ಮುಖ್ಯಸ್ಥರು ದೇಶವನ್ನುದ್ದೇಶಿಸಿ ಮಾತನಾಡಿ ಶಾಂತಿಗಾಗಿ ಮನವಿ ಮಾಡಿದರು. ಹಿಂಸಾಚಾರದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ. ನಮ್ಮ ಸರ್ಕಾರ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದೆ. ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಹಿಂಸಾಚಾರದ ನಂತರ, ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಲ್ಲದೆ ಅಲ್ಪ ಸಮಯದ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಅನುಮತಿ ಕೋರಿದ್ದರು. ಈ ಸಂಪೂರ್ಣ ಘಟನೆಯ ನಂತರ, ನಮ್ಮ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಎಸ್ಎಫ್ ಜಾಗರೂಕರಾಗಿರಲು ಕೇಳಲಾಗಿದೆ. ನಾವು ಢಾಕಾ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಹಸೀನಾ ಅವರೊಂದಿಗೆ ಸರ್ಕಾರವು ಸಂಕ್ಷಿಪ್ತ ಚರ್ಚೆಯನ್ನೂ ನಡೆಸಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಎಸ್. ಜೈಶಂಕರ್
ಪ್ರಧಾನಿ ಶೇಕ್ ಹಸೀನಾ ರಾಜಿನಾಮೆ: ಬಾಂಗ್ಲಾದಲ್ಲಿ ಸೇನಾಡಳಿತ, ಹಿಂದೂಗಳ ಕಗ್ಗೋಲೆ

ಮೂಲಗಳ ಪ್ರಕಾರ, ಹಸೀನಾ ಅವರ ಮುಂದಿನ ಯೋಜನೆಗಳನ್ನು ನಿರ್ಧರಿಸಲು ಸರ್ಕಾರ ಸ್ವಲ್ಪ ಸಮಯವನ್ನು ನೀಡಲು ಬಯಸಿದೆ. ಸದ್ಯ ಅಲ್ಲಿ ಪರಿಸ್ಥಿತಿ ಅಸ್ಥಿರವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ. ಹಿಂದೂಗಳ ದೇವಾಲಯಗಳು ಮತ್ತು ಮನೆಗಳು ಮತ್ತು ಸಂಸ್ಥೆಗಳ ಮೇಲೆ ದಾಳಿಗಳು ನಡೆದಿವೆ ಎಂದರು. ಬಾಂಗ್ಲಾದೇಶದಲ್ಲಿ ಸೋಮವಾರ ದಂಗೆ ನಡೆದಿದೆ. ಈಗ ಅಲ್ಲಿ ಹೊಸ ಮಧ್ಯಂತರ ಸರ್ಕಾರ ರಚಿಸಲು ಸಿದ್ಧತೆಗಳು ನಡೆಯುತ್ತಿವೆ. ಶೇಖ್ ಹಸೀನಾ ದೇಶ ತೊರೆದು ಸೋಮವಾರ ಮಧ್ಯಾಹ್ನ ಭಾರತಕ್ಕೆ ಬಂದಿದ್ದರು. ಅವರು ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ. ಬಾಂಗ್ಲಾದೇಶದ ಖುಲ್ನಾದಲ್ಲಿರುವ ಮೆಹರ್‌ಪುರದಲ್ಲಿರುವ ಇಸ್ಕಾನ್ ದೇವಾಲಯ ಮತ್ತು ಕಾಳಿ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ. ಇಬ್ಬರು ಹಿಂದೂ ಕೌನ್ಸಿಲರ್‌ಗಳನ್ನು ಗುಂಪು ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದೆ.

ಎಸ್. ಜೈಶಂಕರ್
ಶೇಕ್ ಹಸೀನಾ ಬಂಗಲೆಗೆ ನುಗ್ಗಿ ಸೀರೆ, ಒಳ ಉಡುಪು ದೋಚಿದ ಪ್ರತಿಭಟನಾಕಾರರು: ಬೆಡ್ ರೂಮ್ ನಲ್ಲಿ ದಾಂಧಲೆ

ಸರ್ವಪಕ್ಷ ಸಭೆಯಲ್ಲಿ ಎಸ್ ಜೈಶಂಕರ್ ಹೇಳಿದ್ದೇನು?

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ಹಸೀನಾ ಆಘಾತಕ್ಕೊಳಗಾಗಿರುವುದರಿಂದ, ಸರ್ಕಾರವು ಅವರ ಜೊತೆ ಮಾತನಾಡುವ ಮೊದಲು ಸಮಯ ನೀಡುತ್ತಿದೆ. ಭಾರತವು ಬಾಂಗ್ಲಾದೇಶದ ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿದೆ. ಅಲ್ಲದೆ 10,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಳಿದೆ ಎಂದು ಜೈಶಂಕರ್ ಹೇಳಿದ್ದಾರೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವರು ಅಲ್ಲಿನ ಅಶಾಂತಿಯಲ್ಲಿ ವಿದೇಶಿ ಸರ್ಕಾರಗಳ ಪಾತ್ರವನ್ನು ಅಲ್ಲಗಳೆಯಲಿಲ್ಲ, ಆದರೆ ಪರಿಸ್ಥಿತಿ ತುಂಬಾ ಅಸ್ಥಿರವಾಗಿದೆ. ಸರ್ಕಾರವು ಅದರ ಮೇಲೆ ಕಣ್ಣಿಟ್ಟಿದೆ ಎಂದು ಒತ್ತಿ ಹೇಳಿದರು. ಆದಾಗ್ಯೂ, ಪರಿಸ್ಥಿತಿ ಬದಲಾಗುತ್ತಿದೆ ಎಂದು ಅವರು ಹೇಳಿದರು.

ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಜೆಪಿ ನಡ್ಡಾ, ಜೆಡಿಯು ನಾಯಕ ಮತ್ತು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ 'ಲಲ್ಲನ್', ಜೆಡಿ (ಎಸ್) ನಾಯಕ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಇದ್ದರು. ರಾಹುಲ್ ಗಾಂಧಿ, ಡಿಎಂಕೆ ನಾಯಕ ಟಿಆರ್ ಬಾಲು, ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್, ತೃಣಮೂಲ ನಾಯಕ ಸುದೀಪ್ ಬಂಡಿಪಾಧ್ಯಾಯ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com