ಥಾಣೆ: ತಾಯಿಯೊಂದಿಗೆ ರಸ್ತೆಯಲ್ಲಿ ಸಾಗುತ್ತಿದ್ದ ಪುಟ್ಟ ಮಗುವಿನ ನಾಯಿಯೊಂದು ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈ ವರದಿಯಾಗಿದ್ದು, ಪೊಲೀಸರು ನಾಯಿ ಮಾಲೀಕನನ್ನು ಬಂಧಿಸಿದ್ದಾರೆ.
ಮುಂಬೈ ಮಹಾನಗರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ದೈತ್ಯಾಕಾರದ ನಾಯಿ ಬಿದ್ದ ರಭಸಕ್ಕೆ ಮೂರು ವರ್ಷದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಮುಂಬೈನ ಮುಂಬ್ರಾ ಬಳಿಯ ಅಮೃತ್ ನಗರದ ಚಿರಾಗ್ ಮೆನ್ಸನ್ ಎಂಬ ಐದು ಅಂತಸ್ತಿನ ಕಟ್ಟಡದ ಫ್ಲ್ಯಾಟ್ ವೊಂದರಲ್ಲಿ ನಾಯಿ ಸಾಕಲಾಗಿತ್ತು.
ಈ ನಾಯಿ ಮಂಗಳವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಆಟವಾಡುತ್ತಾ ರಸ್ತೆಯ ಮೇಲೆ ಹಠಾತ್ ಎಗರಿ ಬಿದ್ದಿದೆ. ಈ ವೇಳೆ ಅಜ್ಜಿ ಹಾಗೂ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗು ನಾಯಿಯ ಅಡಿಯಲ್ಲಿ ಸಿಲುಕಿದೆ.
ದೈತ್ಯ ನಾಯಿ ಬಿದ್ದ ರಭಸಕ್ಕೆ ಮಗು ಕೆಳಗೆ ಅಪ್ಪಚ್ಚಿಯಾಗಿದ್ದು, ನಿತ್ರಾಣವಾಗಿದೆ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೆಲ ಹೊತ್ತು ನಿತ್ರಾಣವಾಗಿದ್ದ ನಾಯಿ ಬಳಿಕ ಎಚ್ಚರಗೊಂಡು ಅಲ್ಲಿಂದ ಹೊರಟು ಹೋಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 3 ವರ್ಷದ ಮಗು ಸಾವನ್ನಪ್ಪಿದೆ. ನಾಯಿಯಿಂದಾಗಿ ಹೆತ್ತ ಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿದೆ.
ನಾಯಿಗೂ ಬೆನ್ನು ಮೂಳೆ ಮುರಿತ
ಮೂರು ವರ್ಷದ ಮಗುವಿನ ಸಾವಿಗೆ ಕಾರಣವಾದ ನಾಯಿಯನ್ನು ಚಿರಾಗ್ ಮೆನ್ಸನ್ ನ ನಿವಾಸಿ ಜೈದ್ ಸೈಯ್ಯದ್ ಎಂಬುವರು ಸಾಕಿದ್ದರು. ಆದರೆ ಅವರ ನಾಯಿ ಐದನೇ ಮಹಡಿಯ ಮನೆಯಿಂದ ನಾಯಿ ರಸ್ತೆಗೆ ಏಕಾಏಕಿ ಬಿದ್ದಿದ್ದು ಹೇಗೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನೂ ಐದನೇ ಮಹಡಿಯಿಂದ ಬಿದ್ದ ನಾಯಿಯೂ ಗಾಯಗೊಂಡಿದ್ದು, ಅದರ ಬೆನ್ನಿನ ಮೂಳೆ ಮುರಿದಿದೆ. ನಾಯಿಯನ್ನು ಪ್ರಾಣಿ ದಯಾ ಸಂಘದವರ ಸಹಾಯದೊಂದಿಗೆ ಪಶು ಚಿಕಿತ್ಸಾಲಯಕ್ಕೆ ದಾಖಲಿಸಲಾಗಿದ್ದು, ನಾಯಿಗೂ ಚಿಕಿತ್ಸೆ ನಡೆದಿದೆ.
ಮಾಲೀಕನ ಬಂಧನ
ಇನ್ನು ಮಗು ಸಾವು ಬೆನ್ನಲ್ಲೇ ನಾಯಿಯ ಮಾಲೀಕ ಮತ್ತು ಇತರ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬ್ರಾ ಪೊಲೀಸರು ಇದೀಗ ನಾಯಿ ಮಾಲೀಕರನ್ನು ಬಂಧಿಸಿದ್ದಾರೆ. ಕೊಲೆಗೆ ಸಮನಾಗದ ತಪ್ಪಿತಸ್ಥ ಹತ್ಯೆ, ನಿರ್ಲಕ್ಷ್ಯದಿಂದ ಸಾವು, ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement