ಕೋಲ್ಕತ್ತಾ: ಕೋಲ್ಕತಾದಲ್ಲಿ ನಡೆದ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ವಿಚಾರಣೆಗೊಳಪಡಿಸಿದೆ.
ಸಿಬಿಐ ಮೂಲಗಳ ಪ್ರಕಾರ, ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಬೆಳಿಗ್ಗೆ 8.30 ರ ಸುಮಾರಿಗೆ ವಿಚಾರಣೆಗಾಗಿ ಕರೆದೊಯ್ದಿದ್ದು, ಸಾಲ್ಟ್ ಲೇಕ್‌ನಲ್ಲಿರುವ ಸಿಜಿಒ ಸಂಕೀರ್ಣಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆಸ್ಪತ್ರೆಯ ಮಾಜಿ ಸೂಪರಿಂಟೆಂಡೆಂಟ್ ಸಂಜೀವ್ ವಶಿಷ್ಠ ಮತ್ತು ಎದೆಗೂಡಿನ ವಿಭಾಗದ ಮುಖ್ಯಸ್ಥೆ ಅರುಣಾಭ ದತ್ತಾ ಚೌಧರಿ ಅವರನ್ನೂ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕೋಲ್ಕತಾ 'ಹತ್ಯಾಚಾರ' ಪ್ರಕರಣ ಇದೀಗ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗುತ್ತಿದ್ದು, ಗುರುವಾರ ಪ್ರತಿಭಟನಾ ನಿರತರು ಆಸ್ಪತ್ರೆ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಸರ್ಕಾರವನ್ನು ಮತ್ತು ಪೊಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಲ್ಲದೆ ಪ್ರಕರಣ ಸಂಬಂಧ ಮೊದಲು ಸಂಸ್ಥೆಯ ಮುಖ್ಯಸ್ಥರನ್ನೇ ವಿಚಾರಣೆ ನಡೆಸಬೇಕಿತ್ತು ಎಂದು ಚಾಟಿ ಬೀಸಿತ್ತು. ಇದರ ಬೆನ್ನಲ್ಲೇ ಇದೀಗ ಸಿಬಿಐ ಅಧಿಕಾರಿಗಳು ಸಂಸ್ಥೆ ಉನ್ನತಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.
ಜೀವ ಬೆದರಿಕೆ ಇದೆ ಎಂದ ಘೋಷ್
ಇನ್ನು ಈ ಹಿಂದೆಯೂ ಸಿಬಿಐ ಅಧಿಕಾರಿಗಳು ಘೋಷ್ ಅವರನ್ನುವಿಚಾರಣೆಗೊಳಪಡಿಸಲು ಯತ್ನಿಸಿದರಾದರೂ ಅವರು ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದರು. ಹೀಗಾಗಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಘೋಷ್, "ತಮಗೆ ಜೀವ ಬೆದರಿಕೆ ಇದೆ. ತಮಗೆ ರಕ್ಷಣೆ ನೀಡಬೇಕು ಎಂದು ಹೇಳಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಹೈಕೋರ್ಟ್, 'ನಿಮಗೆ 400-500 ಪೊಲೀಸರನ್ನು ರಕ್ಷಣೆಗೆ ನೀಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದರೆ ಕೇಂದ್ರ ಪಡೆಗಳನ್ನು ನಿಯೋಜಿಸುವ ಕುರಿತು ನಿರ್ಧರಿಸಬಹುದು ಎಂದು ಹೇಳಿದೆ.
ಘೋಷ್ ವಿರುದ್ಧ ನಾನಾ ಆರೋಪ
ಇನ್ನು ಹಲವಾರು ವಿದ್ಯಾರ್ಥಿಗಳು ಹಾಗೂ ತೃಣಮೂಲ ಕಾಂಗ್ರೆಸ್‌ನ ಮಾಜಿ ರಾಜ್ಯಸಭಾ ಸಂಸದ ಮತ್ತು ಮಾಜಿ ವಕ್ತಾರರು ಕೂಡ ಆಗಿರುವ ಶಂತನು ಸೇನ್ ಕೂಡ ಘೋಷ್ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದು, ಪ್ರಶ್ನೆಗಳನ್ನು ಸೋರಿಕೆ ಮಾಡಲು ಮತ್ತು ಆಸ್ಪತ್ರೆಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಲಂಚ ಸ್ವೀಕರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿರುವ ಅವರ ವಿರುದ್ಧ ಹಲವು ಆರೋಪಗಳಿವೆ.
ಅವರು ಆರೋಗ್ಯ ಸೇವೆಗೆ ರಾಜೀನಾಮೆ ನೀಡಿದ ನಂತರ, ಅವರನ್ನು ಕೋಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಕೋಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅವರು ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳು ಅವರಿಗೆ ಪ್ರವೇಶವನ್ನು ನಿರಾಕರಿಸಿದ್ದರು.
ಅದೇ ದಿನ, ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರು ಘೋಷ್‌ಗೆ ರಜೆಯ ಮೇಲೆ ತೆರಳುವಂತೆ ಮತ್ತು ಆದರೆ ರಾಜ್ಯವನ್ನು ತೊರೆಯಬಾರದು ಆದೇಶಿಸಿದ್ದರು. ಅಂತೆಯೇ ಪೀಠವು ಕಾಲೇಜಿನ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಯೂ ಪ್ರಶ್ನೆಗಳನ್ನು ಎತ್ತಿತ್ತು.
ಈ ಪೈಕಿ ಪ್ರಮುಖವಾಗಿ ತಾಲಾ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 9, 2024 ದಿನಾಂಕದಂದು ದಾಖಲಾಗಿದ್ದ ಪ್ರಕರಣ ಸಂಖ್ಯೆ 161ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ಮೃತ ಸಂತ್ರಸ್ತೆ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾಗ, ಪ್ರಾಂಶುಪಾಲರು/ಆಸ್ಪತ್ರೆ ಏಕೆ ಔಪಚಾರಿಕವಾಗಿ ದೂರು ದಾಖಲಿಸಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಇದು ನಮ್ಮ ದೃಷ್ಟಿಯಲ್ಲಿ ಗಂಭೀರ ಲೋಪವಾಗಿದ್ದು, ಅನುಮಾನಕ್ಕೆ ಅವಕಾಶ ಕಲ್ಪಿಸಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ವೈದ್ಯರು ಅಪರಾಧದಲ್ಲಿ ಭಾಗಿ: ಪೋಷಕರ ಆರೋಪ
ಏತನ್ಮಧ್ಯೆ, ಅದೇ ವೈದ್ಯಕೀಯ ಸಂಸ್ಥೆಯ ಕೆಲವು ಇಂಟರ್ನ್‌ಗಳು ಮತ್ತು ವೈದ್ಯರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಸಿಬಿಐಗೆ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮ ಮಗಳ ಹತ್ಯೆಗೆ ಸಂಬಂಧಿಸಿರುವ ಶಂಕಿತ ವ್ಯಕ್ತಿಗಳ ಹೆಸರನ್ನು ಪೋಷಕರು ಕೇಂದ್ರೀಯ ತನಿಖಾ ಸಂಸ್ಥೆಗೆ ಒದಗಿಸಿದ್ದಾರೆ.
Advertisement