ಕೋಲ್ಕತಾ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಕೋಲ್ಕತಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಮರಣೋತ್ತರ ವರದಿ ನೀಡಿದ್ದ ವೈದ್ಯರು ಇಂದು ಸ್ಪಷ್ಟನೆಯೊಂದನ್ನು ನೀಡಿದ್ದು, ಆಕೆಯ ದೇಹದಲ್ಲಿ ಪತ್ತೆಯಾಗಿದ್ದು 150 ಗ್ರಾಂ ವೀರ್ಯವಲ್ಲ.. ಅದು ಗರ್ಭಾಶಯದ ತೂಕ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ರೂರವಾಗಿ ಕೊಲೆಗೀಡಾದ ಟ್ರೈನಿ ವೈದ್ಯೆಯ ದೇಹದ ಮೇಲೆ 150 ಗ್ರಾಂ ವೀರ್ಯ ಕಂಡು ಬಂದಿದೆ ಎನ್ನುವ ಸುದ್ದಿಯನ್ನು ವೈದ್ಯರೊಬ್ಬರು ನಿರಾಕರಿಸಿದ್ದಾರೆ. ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾದ 150 ಗ್ರಾಂ ಎನ್ನುವುದು ಗರ್ಭಾಶಯದ ತೂಕವೇ ಹೊರತು ಯಾವುದೇ ದ್ರವದ ತೂಕವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೃತ ವೈದ್ಯೆಯ ಶರೀರದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಮರಣೋತ್ತರ ವರದಿಯು ಉಲ್ಲೇಖಿಸಲಾದ 150 ಗ್ರಾಂ ಸಂತ್ರಸ್ತೆಯ ಆಂತರಿಕ ಅವಯವ ವಿಶೇಷವಾಗಿ ಗರ್ಭಾಶಯದ ತೂಕವನ್ನು ಸೂಚಿಸುತ್ತದೆಯೇ ಹೊರತು ಅದು ಯಾವುದೇ ದ್ರವದ ತೂಕವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
''ಇಂತಹ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಒಳ ಅಂಗಗಳ ತೂಕವನ್ನು ಉಲ್ಲೇಖಿಸಲಾಗುತ್ತದೆ. ಹೀಗಾಗಿ 150 ಗ್ರಾಂ ಎನ್ನುವುದು ಗರ್ಭಾಶಯದ ಅಳತೆಯಾಗಿದೆ. ಅಲ್ಲದೆ ಘಟನೆ ನಡೆದ ಸುಮಾರು 5 ಗಂಟೆಗಳ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿದ್ದರು. ಹೀಗಾಗಿ ಅಷ್ಟು ದೀರ್ಘ ಸಮಯಗಳ ಕಾಲ ಯಾವುದೇ ದ್ರವ ವಸ್ತು ಅದೇ ಸ್ಥಿತಿಯಲ್ಲಿ ಉಳಿಯಲು ಸಾಧ್ಯವಿಲ್ಲʼʼ ಎಂದು ವೈದ್ಯರು ತಿಳಿಸಿದ್ದಾರೆ. “ಡಿಎನ್ಎ ಪರೀಕ್ಷೆಯ ವರದಿ ಹೊರ ಬಂದ ಬಳಿಕ ಎಲ್ಲ ಗೊಂದಲಗಳಿಗೆ ಉತ್ತರ ಸಿಗಲಿದೆʼʼ ಎಂದು ಅವರು ವಿವರಿಸಿದ್ದಾರೆ.
ವರದಿಯಲ್ಲಿ ವಿವಾದವೇಕೆ?
ಈ ಹಿಂದೆ ಕೊಲೆಗೀಡಾದ ಟ್ರೈನಿ ವೈದ್ಯೆಯ ದೇಹದ ಮೇಲೆ 150 ಗ್ರಾಂ ವೀರ್ಯ ಕಂಡು ಬಂದಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಆರೋಗ್ಯವಂತ ಸಾಮಾನ್ಯ ಪುರುಷನ ವೀರ್ಯದ ತೂಕ 15ಗ್ರಾಂಗಳ ವರಗೂ ತೂಗುತ್ತದೆ. ಆದರೆ ಆಕೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿರುವುದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಚರ್ಚೆಯಾಗುತ್ತಿತ್ತು. ಇದೀಗ ಈ ಊಹಾಪೋಹಕ್ಕೆ ವೈದ್ಯರು ತೆರೆ ಎಳೆದಿದ್ದಾರೆ.
ಏನಿದು ಘಟನೆ?
ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ಸಂತ್ರಸ್ತೆ ಆಗಸ್ಟ್ 9 ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 31 ವರ್ಷದ ವೈದ್ಯೆಯ ದೇಹದಲ್ಲಿ ಅತೀ ಕ್ರೂರವಾಗಿ ಹಲ್ಲೆ ನಡೆಸಿದ್ದನ್ನು ಸೂಚಿಸುವ ಅನೇಕ ಗಾಯದ ಗುರುತುಗಳಿವೆ ಎನ್ನುವುದನ್ನು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿತ್ತು. ʼʼಸಂತ್ರಸ್ತೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಮುಖ ಮತ್ತು ಉಗುರುಗಳ ಮೇಲೆ ಗಾಯಗಳಾಗಿವೆ. ಸಂತ್ರಸ್ತೆಯ ಖಾಸಗಿ ಭಾಗಗಳಿಂದಲೂ ರಕ್ತಸ್ರಾವವಾಗಿದೆ. ಮಾತ್ರವಲ್ಲ ಹೊಟ್ಟೆ, ಎಡಗಾಲಿಗೆ ಗಾಯಗಳಾಗಿವೆ. ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿ ಹೀಗೆ ಎಲ್ಲ ಅಂಗಗಳಲ್ಲಿಯೂ ಗಾಯದ ಗುರುತುಗಳಿವೆʼʼ ಎಂದು ವರದಿ ತಿಳಿಸಿತ್ತು.
Advertisement