ಕೋಲ್ಕತಾ: ಕೋಲ್ಕತಾ ಹತ್ಯಾಚಾರ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ಘಟನೆಯನ್ನು ಖಂಡಿಸಿರುವ ಲೈಂಗಿಕ ಕಾರ್ಯಕರ್ತೆಯೊಬ್ಬರು ನಿಮ್ಮ ಕಾಮತೃಷೆ ನಾವು ತೀರಿಸುತ್ತೇವೆ.. ಆದರೆ ಅಮಾಯಕ ಹೆಣ್ಣುಮಕ್ಕಳ ತಂಟೆಗೆ ಹೋಗಬೇಡಿ ಎಂದು ಹೇಳಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಕೋಲ್ಕತಾ ಹತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ನಾಗರೀಕ ಸಮಾಜ ಮತ್ತೊಮ್ಮೆ ತಲೆ ತಗ್ಗಿಸುವಂತಾಗಿದೆ. ದೇಶಾದ್ಯಂತ ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸುತ್ತಿದ್ದು, ದೇಶಾದ್ಯಂತ ವೈದ್ಯರು ಹತ್ಯಾಚಾರ ಪ್ರಕರಣದ ವಿಚಾರವಾಗಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಗೆ ಕೋಲ್ಕತಾದ ಲೈಂಗಿಕ ಕಾರ್ಯಕರ್ತೆಯರೂ ಕೂಡ ಕೈ ಜೋಡಿಸಿದ್ದು, ಅನಾಗರೀಕ ವರ್ತನೆ ವಿರುದ್ಧ ಧನಿ ಎತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಲೈಂಗಿಕ ಕಾರ್ಯಕರ್ತೆಯೊಬ್ಬರು, ''ಅತ್ಯಾಚಾರ ಒಂದು ಕ್ರೂರ ವರ್ತನೆ, ಅತ್ಯಾಚಾರ ಹೇಗೆ ತಡೆಯಬಹುದು? ಇಲ್ಲಿ ಇಷ್ಟು ದೊಡ್ಡ ರೆಡ್ ಲೈಟ್ ಏರಿಯಾ ಇದೆ. ನಿಮಗೆ ಕಾಮತೃಷೆ ತೀರಿಸಿಕೊಳ್ಳಬೇಕು ಎಂದಿದ್ದರೆ ಇಲ್ಲಿಗೆ ಬನ್ನಿ. 10 ರೂ, 20 ರೂ, 50 ರೂ, ನಿಮ್ಮ ಕೈಲಾದಷ್ಟು ಹಣ ನಮಗೆ ಕೊಡಿ.. ನಾವು ನಿಮ್ಮ ಲೈಂಗಿಕ ಬಯಕೆ ತೀರಿಸುತ್ತೇವೆ. ನಿಮ್ಮ ಜೊತೆ ಕೆಲಸ ಮಾಡಲು ನಾವು ಸಿದ್ದರಿರುವಾಗ ಅಮಾಯಕ ಹೆಣ್ಣು ಮಕ್ಕಳನ್ನೇಕೆ ಕಾಡುತ್ತಿದ್ದೀರಿ. ಅಮಾಯಕ ಹೆಣ್ಣುಮಕ್ಕಳ ತಂಟೆಗೆ ಹೋಗಬೇಡಿ.. ಹೆಣ್ಣು ಮಕ್ಕಳು ತಮ್ಮ ತಮ್ಮ ದೈನಂದಿನ ಕೆಲಸಕ್ಕಾಗಿ ಆಚೆ ಹೋಗುತ್ತಿರುತ್ತಾರೆ.. ಅವರ ಮೇಲೆ ದೌರ್ಜನ್ಯವೆಸಗವುದು ಅಕ್ಷಮ್ಯ. ಮೊದಲು ನಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕು'' ಎಂದು ಹೇಳಿದ್ದಾರೆ.
ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಏನಿದು ಘಟನೆ?
ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ಸಂತ್ರಸ್ತೆ ಆಗಸ್ಟ್ 9 ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 31 ವರ್ಷದ ವೈದ್ಯೆಯ ದೇಹದಲ್ಲಿ ಅತೀ ಕ್ರೂರವಾಗಿ ಹಲ್ಲೆ ನಡೆಸಿದ್ದನ್ನು ಸೂಚಿಸುವ ಅನೇಕ ಗಾಯದ ಗುರುತುಗಳಿವೆ ಎನ್ನುವುದನ್ನು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿತ್ತು. ʼʼಸಂತ್ರಸ್ತೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಮುಖ ಮತ್ತು ಉಗುರುಗಳ ಮೇಲೆ ಗಾಯಗಳಾಗಿವೆ. ಸಂತ್ರಸ್ತೆಯ ಖಾಸಗಿ ಭಾಗಗಳಿಂದಲೂ ರಕ್ತಸ್ರಾವವಾಗಿದೆ. ಮಾತ್ರವಲ್ಲ ಹೊಟ್ಟೆ, ಎಡಗಾಲಿಗೆ ಗಾಯಗಳಾಗಿವೆ. ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿ ಹೀಗೆ ಎಲ್ಲ ಅಂಗಗಳಲ್ಲಿಯೂ ಗಾಯದ ಗುರುತುಗಳಿವೆʼʼ ಎಂದು ವರದಿ ತಿಳಿಸಿತ್ತು.
Advertisement