ಚೆನ್ನೈ: ಭಾರತದ ಮೊಟ್ಟ ಮೊದಲ ಹೈಬ್ರಿಡ್ ರೀ ಯೂಸಬಲ್ ರಾಕೆಟ್ 'RHUMI-1' ಯಶಸ್ವಿಯಾಗಿ ಶನಿವಾರ ಉಡಾವಣೆ ಮಾಡಲಾಗಿದೆ.
ತಮಿಳುನಾಡಿನ ಚೆನ್ನೈನ ಈಸ್ಟ್ ಕೋಸ್ಟ್ಲೈನ್ನಿಂದ 'RHUMI-1' ರಾಕೆಟ್ ಅನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಖಾಸಗಿ ಸಂಸ್ಥೆಯಾದ ಸ್ಪೇಸ್ಝೋನ್ ಈ ಮರುಬಳಕೆ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ.
ರುಮಿ-1 ರಾಕೆಟ್ ಶನಿವಾರ ಮೂರು ಕ್ಯೂಬ್ ಸೆಟಿಲೈಟ್ ಮತ್ತು 50 ಪಿಕೋ ಸೆಟಿಲೈಟ್ಗಳನ್ನು ಹೊತ್ತು ಭೂಮಿಯಿಂದ 35 ಕಿಮೀ ಎತ್ತರದ ಕಕ್ಷೆವರೆಗೂ ಹೋಗಿ ಅಲ್ಲಿ ಆ ಎಲ್ಲಾ ಪೇಲೋಡ್ಗಳನ್ನು ಅವುಗಳ ನಿಗದಿತ ಜಾಗಕ್ಕೆ ಬಿಟ್ಟು ವಾಪಸ್ ಬರಲಿದೆ. ದೇಶೀಯವಾಗಿ ನಿರ್ಮಿಸಲಾಗಿರುವ ಈ ರಾಕೆಟ್ಗೆ ಪ್ಯಾರಾಚೂಟ್ ಅಳವಡಿಸಲಾಗಿದೆ.
ಪೇಲೋಡ್ಗಳನ್ನು ಭೂಕಕ್ಷೆಗೆ ಬಿಟ್ಟು ಇದು ನಿಗದಿತ ಸಮುದ್ರ ಸ್ಥಳಕ್ಕೆ ಪ್ಯಾರಚೂಟ್ ಸಹಾಯದಿಂದ ನಿಧಾನವಾಗಿ ಬೀಳುತ್ತದೆ. ಬಳಿಕ ನೀತಿನಿಂದ ಈ ರಾಕೆಟ್ನ ಭಾಗಗಳನ್ನು ಸಂಗ್ರಹಿಸಿ ಮತ್ತೆ ಹೊಸ ರಾಕೆಟ್ ತಯಾರಿಕೆಗೆ ಅದನ್ನು ಬಳಸಿಕೊಳ್ಳಲಾಗುತ್ತದೆ.
ಈ ರಾಕೆಟ್ನಲ್ಲಿ ಹೈಬ್ರಿಡ್ ಪ್ರೊಪಲ್ಷನ್ ಸಿಸ್ಟಂ ಇದ್ದು, ಲಿಕ್ವಿಡ್ ಆಕ್ಸಿಡೈಸರ್ ಮತ್ತು ಸಾಲಿಡ್ ಫುಯೆಲ್ ಹೀಗೆ ಎರಡು ರೀತಿಯ ಇಂಧನದ ವ್ಯವಸ್ಥೆ ಮಾಡಲಾಗಿರುತ್ತದೆ. ಇದರ ಏರ್ಫ್ರೇಮ್ ಅನ್ನು ಕಾರ್ಬನ್ ಫೈಬರ್, ಗ್ಲಾಸ್ ಫೈಬರ್ ಇತ್ಯಾದಿ ಸುಧಾರಿತ ವಸ್ತುಗಳಿಂದ ನಿರ್ಮಿಸಲಾಗಿದೆ. ಇದರ ನಿರ್ಮಾಣ ವೆಚ್ಚವೂ ಸಾಂಪ್ರದಾಯಿಕ ರಾಕೆಟ್ಗಿಂತ ಬಹಳ ಕಡಿಮೆ ಎಂದು ಸ್ಪೇಸ್ಝೋನ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ರುಮಿ-1 ರಾಕೆಟ್ ಅಭಿವೃದ್ದಿಗೆ ಬಳಸಲಾಗಿರುವ ತಂತ್ರಜ್ಞಾನವನ್ನು ಕ್ಷಿಪಣಿ ಕ್ಷೇತ್ರಕ್ಕೂ ಅಳವಡಿಸಬಹುದು. ಇದರಿಂದ ಉತ್ಕೃಷ್ಟವಾದ ಕ್ಷಿಪಣಿಗಳನ್ನು ದೇಶೀಯವಾಗಿ ನಿರ್ಮಿಸಬಹುದು ಎಂದು ರುಮಿ-1 ರಾಕೆಟ್ ಯೋಜನೆಯ ಉತ್ತೇಜಕರಲ್ಲಿ ಒಬ್ಬರಾಗಿರುವ ಮಾರ್ಟಿನ್ ಗ್ರೂಪ್ ಸಂಸ್ಥೆಗಳ ನಿರ್ದೇಶಕ ಜೋಸ್ ಚಾರ್ಲ್ಸ್ ಮಾರ್ಟಿನ್ ಹೇಳಿದ್ದಾರೆ.
ರುಮಿ ಹೆಸರೇಕೆ?
ರುಮಿ-1 ರಾಕೆಟ್ ಅನ್ನು ತಯಾರಿಸಿದ್ದು ಸ್ಪೇಸ್ ಝೋನ್ ಇಂಡಿಯಾ ಸಂಸ್ಥೆ. ಇದರ ಸಿಇಒ ಆನಂದ್ ಮೇಗಲಿಂಗಂ. ಈ ರಾಕೆಟ್ಗೆ ಇಡಲಾಗಿರುವ ರುಮಿ ಹೆಸರು ಆನಂದ್ ಮೇಗಲಿಂಗಂ ಅವರ ಮಗನದ್ದು. ಅವರ ಮಗನ ಹೆಸರು ರುಮೇಂದ್ರನ್. ಈ ರಾಕೆಟ್ ತಯಾರಿಕೆಗೆ ಅಪ್ಪ ಸಾಕಷ್ಟು ಸಮಯ ಮತ್ತು ಶ್ರಮ ವ್ಯಯಿಸಿದ್ದಾರೆ. ಆ ಸಮಯವನ್ನು ಮಗ ತನಗಾಗಿ ತ್ಯಾಗ ಮಾಡಿದ ಕೃತಾರ್ಥತೆ ಅಪ್ಪ ಆನಂದ್ ಮೇಗಲಿಂಗಂ ಅವರದ್ದು. ಇದೇ ಕಾರಣಕ್ಕೆ ಈ ರಾಕೆಟ್ ಗೆ ರುಮಿ ಎಂದು ಹೆಸರಿಡಲಾಗಿದೆ.
Advertisement