ಮಧುರೈ: ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ನಮಿತಾ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಅವಮಾನ ಮಾಡಿರುವ ಆರೋಪ ಕೇಳಿಬಂದಿದೆ.
ದೇವಾಲಯದ ಅಧಿಕಾರಿಗಳು ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸು ಎಂದು ಕೇಳುವ ಮೂಲಕ ದೇವರ ದರ್ಶನ ಪಡೆಯದಂತೆ ತಡೆದಿದ್ದು, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟಿ, "ನಾನು ಹಿಂದೂ ಎಂದು ಸಾಬೀತುಪಡಿಸಲು ಸರ್ಟಿಫಿಕೇಟ್ ಕೇಳಿದರು. ನನ್ನ ಜಾತಿ ಪ್ರಮಾಣಪತ್ರವನ್ನು ಸಹ ಕೇಳಿದರು. ದೇಶದಲ್ಲಿ ಭೇಟಿ ನೀಡಿದ ಯಾವುದೇ ದೇವಾಲಯದಲ್ಲಿ ಇಂತಹ ಅಗ್ನಿಪರೀಕ್ಷೆಗೆ ಒಳಗಾಗಿರಲಿಲ್ಲ ಎಂದು ಅವರು ನೋವು ತೋಡಿಕೊಂಡರು.
ನಾನು ಹಿಂದೂವಾಗಿ ಹುಟ್ಟಿದ್ದು, ನನ್ನ ಮದುವೆ ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಮಗನಿಗೆ ಶ್ರೀಕೃಷ್ಣನ ಹೆಸರಿಡಲಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಸಿಬ್ಬಂದಿ ಅಸಭ್ಯವಾಗಿ ಮತ್ತು ದುರಹಂಕಾರದಿಂದ ಮಾತನಾಡಿದರು. ನನ್ನ ಜಾತಿ ಮತ್ತು ನನ್ನ ಧರ್ಮವನ್ನು ತೋರಿಸಲು ಪ್ರಮಾಣಪತ್ರವನ್ನು ಕೇಳಿದರು ಎಂದು ಅವರು ಹೇಳಿದರು.
ನಮಿತಾ ಅವರ ಆರೋಪಗಳನ್ನು ದೇವಾಲಯದ ಹಿರಿಯ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ನಮಿತಾ ಮತ್ತು ಅವರ ಪತಿ ಮುಖವಾಡ ಧರಿಸಿದ್ದರಿಂದ ಅವರು ಹಿಂದೂಗಳೇ ಎಂದು ವಿಚಾರಿಸಲು ದೇವಾಲಯದ ಸಂಪ್ರದಾಯದಂತೆ ನಡೆದುಕೊಂಡಿದ್ದೇವೆ. ನಮಿತಾ ಹಾಗೂ ಅವರ ದಂಪತಿಯಿಂದ ಸ್ಪಷ್ಟನೆ ಪಡೆದ ನಂತರ ಆಕೆಯ ಹಣೆಗೆ ಕುಂಕುಮ ಇಡಲಾಗಿದೆ. ಮೀನಾಕ್ಷಿ ದೇವಾಲಯಕ್ಕೆ ಕರೆದೊಯ್ದು ದೇವರ ದರ್ಶನ ಮಾಡಿಸಲಾಗಿದೆ ಎಂದು ತಿಳಿಸಿದರು. ಧರ್ಮವನ್ನು ಸ್ಪಷ್ಟಪಡಿಸಿದ ನಂತರ ತನ್ನ ಹಣೆಗೆ ಕುಂಕುಮವನ್ನಿಟ್ಟು, ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ನಮಿತಾ ತಿಳಿಸಿದ್ದಾರೆ.
Advertisement