
ಭುವನೇಶ್ವರ: ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಆರೋಪಿ ಸಂತ್ರಸ್ಥೆಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವ ಧಾರುಣ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
ಒಡಿಶಾದ ರೂರ್ಕೆಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜಾಮೀನು ಪಡೆದಿದ್ದ ಆರೋಪಿ ಕುನು ಕಿಸಾನ್ (24 ವರ್ಷ) ಎಂಬಾತ ಜಾರ್ಸುಗುಡಾದಿಂದ ಸಂತ್ರಸ್ತೆಯನ್ನು ಅಪಹರಿಸಿ ಕೊಲೆಗೈದಿದ್ದಾನೆ.
ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸಮೀಪದ ಬ್ರಹ್ಮಣಿ ನದಿಗೆ ಎಸೆದಿದ್ದಾನೆ.
ಸಂತ್ರಸ್ಥ ಬಾಲಕಿ ನಾಪತ್ತೆ ಪ್ರಕರಣದಲ್ಲಿ ಅತ್ಯಾಚಾರ ಆರೋಪಿ ಕುನು ಕಿಸಾನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಜಾರ್ಸುಗುಡ ಪೊಲೀಸರು ಆತನನ್ನು ರೂರ್ಕೆಲಾಗೆ ಕರೆತಂದು ಸ್ಥಳ ಪರಿಶೀಲನೆ ನಡೆಸಿದಾಗ ಬ್ರಹ್ಮಣಿ ನದಿಯ 2ನೇ ಸೇತುವೆ ಬಳಿ ದೇಹದ ಬಹುತೇಕ ಭಾಗಗಳು ಪತ್ತೆಯಾಗಿವೆ.
ಪೊಲೀಸರು ಮತ್ತು ODRAF ಸಿಬ್ಬಂದಿಯ ಸಹಾಯದಿಂದ, ರೂರ್ಕೆಲಾ ಪೊಲೀಸರು ಜಾರ್ಸುಗುಡಾ ಪೊಲೀಸರ ಸಮ್ಮುಖದಲ್ಲಿ ಸೇತುವೆಯ ಬಳಿ ನದಿಯಿಂದ ಸಂತ್ರಸ್ಥೆಯ ದೇಹದ ಮುಂಡ ಮತ್ತು ದೇಹದ ಇತರ ಭಾಗಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ಸಮೀಪದ ತಾರ್ಕೆರಾ ಪಂಪ್ ಹೌಸ್ ಬಳಿಯ ಜವುಗು ಪೊದೆಯಿಂದರಲ್ಲಿ ಸಿಲುಕಿದ್ದ ದೇಹದ ಸಣ್ಣ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ
ಪೊಲೀಸ್ ಡಿಐಜಿ (ಪಶ್ಚಿಮ ಶ್ರೇಣಿ) ಬ್ರಿಜೇಶ್ ಕುಮಾರ್ ರೈ ಅವರು ಮಾತನಾಡಿ, 'ಪ್ರಾಥಮಿಕ ಮಾಹಿತಿಯ ಪ್ರಕಾರ ಅಪ್ರಾಪ್ತಳ ಮೇಲೆ ಆರೋಪಿ ಕುನು ಕಿಸಾನ್ ಸೇರಿದಂತೆ ಹಲವರು ಆಗಸ್ಟ್ 2023 ರಲ್ಲಿ ಅತ್ಯಾಚಾರವೆಸಗಿದ್ದರು. ಈ ಸಂಬಂಧ ಧಾರೌಡಿಹಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣವನ್ನು ದಾಖಲಿಸಲಾಗಿತ್ತು.
ಆರೋಪಿಗಳು ಈ ವರ್ಷದ ಜನವರಿಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು ಮತ್ತು ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಎದುರಿಸುತ್ತಿದ್ದರು. ಸಂತ್ರಸ್ತೆ ಜಾರ್ಸುಗುಡದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡು ಬೆಹೆರಮಾಲ್‌ನಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಬಳಿಕ ಆಕೆ ಡಿಸೆಂಬರ್ 7 ರಿಂದ ನಾಪತ್ತೆಯಾಗಿದ್ದಳು.
ಈ ನಾಪತ್ತೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಜಾರ್ಸುಗುಡಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವ ಕುರಿತು ಬಾಯಿ ಬಿಟ್ಟಿದ್ದಾನೆ. ಆರಂಭದಲ್ಲಿ ಆರೋಪಿಗಳು ಪೋಕ್ಸೊ ಪ್ರಕರಣದಲ್ಲಿ ಪರಿಹಾರ ನೀಡಿ ಪ್ರಕರಣ ವಾಪಸ್ ಪಡೆಯುವಂತೆ ಆಕೆಯನ್ನು ಒತ್ತಾಯಿಸಿದ್ದಾರೆ. ಆದರೆ ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನು ಅಪಹರಿಸಿದ್ದಾರೆ.
ಜಾರ್ಸುಗುಡಾದಿಂದ ಅಪಹರಿಸಿದ ನಂತರ, ಆರೋಪಿಗಳು ಸುಂದರ್‌ಗಢ್‌ನ ಲತಿಕಟಾ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯನ್ನು ಕೊಂದುಹಾಕಿದ್ದಾರೆ. ಬಳಿಕ ದೇಹ ಯಾರಿಗೂ ಸಿಗದಂತೆ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿದ್ದಾರೆ. ಪ್ರಸ್ತುತ ದೇಹದ ಬಹುತೇಕ ಭಾಗಗಳನ್ನು ವಶ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Advertisement