
ಚಂಡೀಗಡ: ಶುಕ್ರವಾರ ಪಂಜಾಬ್‌ನ ಬಟಿಂಡಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಅಪಘಾತದ ವೇಳೆ ಐವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಶಾಸಕ ಜಗರೂಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಸದ್ಯ ಗಾಯಗೊಂಡಿರುವ 18 ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿರುವ ಬಟಿಂಡಾ ನಗರದ ಶಹೀದ್ ಭಾಯಿ ಮಣಿ ಸಿಂಗ್ ಸಿವಿಲ್ ಆಸ್ಪತ್ರೆಗೆ ಶಾಸಕರು ಭೇಟಿ ನೀಡಿ, ಡಾ. ರಮಣದೀಪ್ ಸಿಂಗ್ಲಾ ಅವರಿಂದ ಮಾಹಿತಿ ಪಡೆದಿದ್ದಾರೆ.
'ಬಸ್ ಅಪಘಾತ ಸಂಭವಿಸಿದ ಸ್ಥಳದಲ್ಲೇ ಐವರು ಸಾವಿಗೀಡಾಗಿದ್ದು, ಮೂವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಸುಮಾರು 18 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಶಾಸಕರು ತಿಳಿಸಿದ್ದಾರೆ.
ತಲವಾಂಡಿ ಸಾಬೋದಿಂದ ಬಟಿಂಡಾ ನಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಬಟಿಂಡಾದ ಜಿವಾನ್ ಸಿಂಗ್ ವಾಲಾ ಗ್ರಾಮದ ಬಳಿ ಸ್ಕಿಡ್ ಆಗಿ ಸೇತುವೆಗೆ ಅಪ್ಪಳಿಸಿ, ಕೆಳಗಿದ್ದ ಚರಂಡಿಗೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.
ಚರಂಡಿಗೆ ಬೀಳುವ ಮೊದಲು ಬಸ್ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದಾಗ ಬಟಿಂಡಾದಲ್ಲಿ ಮಳೆಯಾಗುತ್ತಿದ್ದು, ಅಪಘಾತದ ಕಾರಣವನ್ನು ತನಿಖೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Advertisement