ಸೈಬರ್ ಕ್ರೈಂ ಪ್ರಕರಣಗಳಲ್ಲಿ ಹೆಚ್ಚಳ: ಹಾಟ್ ಸ್ಪಾಟ್'ಗಳ ಪತ್ತೆಗೆ 7 ತಂಡಗಳ ರಚಿಸಿದ ಕೇಂದ್ರ ಸರ್ಕಾರ!

ಭಾರತದಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂಬ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ)ದ ಇತ್ತೀಚಿನ ವರದಿ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಪ್ರದೇಶಗಳ ಪತ್ತೆಗೆ 7 ತಂಡಗಳನ್ನು ರಚನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂಬ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ)ದ ಇತ್ತೀಚಿನ ವರದಿ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಪ್ರದೇಶಗಳ ಪತ್ತೆಗೆ 7 ತಂಡಗಳನ್ನು ರಚನೆ ಮಾಡಿದೆ.

ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 2020 ರಲ್ಲಿ 50,035 ಇದ್ದ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ 2022ರ ವೇಳೆಗೆ 65,893 ಕ್ಕೆ ತಲುಪಿದ್ದು, ಈ ಪೈಕಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ 15,297 ಮತ್ತು 12,556 ಪ್ರಕರಣಗಳು ಪತ್ತೆಯಾಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ, ನಂತರದ ಸ್ಥಾನವನ್ನು ಉತ್ತರಪ್ರದೇಶ (5,496) ಮತ್ತು ಮಹಾರಾಷ್ಟ್ರ (8,249) ಪಡೆದುಕೊಂಡಿದೆ.

ಈ ಅಂಕಿಅಂಶಗಳನ್ನು ಗಂಭೀರವಾಗಿ ಪರಿಗಮಿಸಿರುವ ಕೇಂದ್ರ ಗೃಹ ಸಚಿವಾಲಯವು, ಹಾಟ್ ಸ್ಪಾಟ್'ಗಳ ಪತ್ತೆಗೆ 7 ಜಂಟಿ ಸೈಬರ್ ಸಮನ್ವಯ ತಂಡಗಳನ್ನು (ಜೆಸಿಸಿಟಿ) ರಚನೆ ಮಾಡಿದೆ.

ಈ ತಂಡಗಳು 'ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್' (I4C) ಅಡಿಯಲ್ಲಿ ಬರಲಿವೆ. ಈ ಯೋಜನೆಯು ಸರ್ಕಾರದ ಹಲವು ಇಲಾಖೆಗಳ ನಡುವೆ ಸಹಭಾಗಿತ್ವ ಹಾಗೂ ಸಂಪರ್ಕ ಸಾಧಿಸಿ ಸೈಬರ್ ಕ್ರೈಂಗೆ ಶೀಘ್ರವಾಗಿ ಕಡಿವಾಣ ಹಾಕಲಿವೆ.

ಸೈಬರ್ ಕ್ರೈಮ್‌ನ ಸದಾ ವಿಕಸನಗೊಳ್ಳುತ್ತಿರುತ್ತದೆ. ಇದಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳ ಕೈಗೊಳ್ಳಲಾಗಿದ್ದು, 2023 ರಲ್ಲಿ ಹೈದರಾಬಾದ್, ಅಹಮದಾಬಾದ್, ಗುವಾಹಟಿ, ವಿಶಾಖಪಟ್ಟಣಂ, ಲಖನೌ, ರಾಂಚಿ ಮತ್ತು ಚಂಡೀಗಢದಲ್ಲಿ ಸರಣಿ ಕಾರ್ಯಾಗಾರಗಳ ನಡೆಸಲಾಗಿದೆ. ಸೈಬರ್ ಕ್ರೈಮ್ ಗಳ ತಕ್ಷಣ ವರದಿಗಾಗಿ ಮತ್ತು ವಂಚಕರು ಹಣವನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಲು I4C ಅಡಿಯಲ್ಲಿ 'ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ' ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ 4.7 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ರೂ. 1,200 ಕೋಟಿಗೂ ಹೆಚ್ಚು ಹಣವನ್ನು ವಂಚಕರ ಪಾಲಾಗದಂತೆ ಮಾಡಲಾಗಿದೆ. ಆನ್‌ಲೈನ್ ಸೈಬರ್ ದೂರುಗಳನ್ನು ಸಲ್ಲಿಸಲು ಸಹಾಯ ಪಡೆಯಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ '1930' ಅನ್ನು ಕಾರ್ಯಗತಗೊಳಿಸಲಾಗಿದೆ, ಸುಮಾರು 3.2 ಲಕ್ಷ ಸಿಮ್ ಕಾರ್ಡ್‌ಗಳು ಮತ್ತು 49,000 IMEI ಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com