ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 180 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,804ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಮುಂಜಾನೆ 8 ಗಂಟೆಗೆ ಲಭ್ಯವಾದ ನವೀಕೃತ ಮಾಹಿತಿ ಪ್ರಕಾರ, ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಮೂವರು ಸಾವಿಗೀಡಾಗಿದ್ದಾರೆ.
2020ರ ಕೊನೆಯಲ್ಲಿ ಆರಂಭವಾದ ಕೋವಿಡ್ ಸಾಂಕ್ರಾಮಿಕದ ನಾಲ್ಕು ವರ್ಷಗಳಿಂದಲೂ ಈವರೆಗೆ 4.5 ಕೋಟಿಗೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಈ ಪೈಕಿ 5.3 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ ಇದುವರೆಗೆ 4.4 ಕೋಟಿಗೂ ಅಧಿಕ ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.81 ರಷ್ಟಿದೆ.
ಸಚಿವಾಲಯದ ವೆಬ್‌ಸೈಟಿನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ಅಡಿ ಈವರೆಗೆ 220.67 ಕೋಟಿಗೂ ಅಧಿಕ ಕೋವಿಡ್ ವಿರುದ್ಧದ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದೆ.
Advertisement