ಭಾರತ-ಮಾಲ್ಡೀವ್ಸ್ ವಿವಾದ: ಲಕ್ಷದ್ವೀಪದಲ್ಲಿ 200 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ!

ಭಾರತ-ಮಾಲ್ಡೀವ್ಸ್ ವಿವಾದದ ನಡುವೆಯೇ ಅಲ್ಲಿನ ಎರಡು ಯೋಜನೆಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಪ್ರವಾಸಿಗರಿಗೆ ಲಕ್ಷದ್ವೀಪದ ಆಕರ್ಷಣೆ ಹೆಚ್ಚಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. 
ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭ
ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭ

ನವದೆಹಲಿ: ಭಾರತ-ಮಾಲ್ಡೀವ್ಸ್ ವಿವಾದದ ನಡುವೆಯೇ ಅಲ್ಲಿನ ಎರಡು ಯೋಜನೆಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಪ್ರವಾಸಿಗರಿಗೆ ಲಕ್ಷದ್ವೀಪದ ಆಕರ್ಷಣೆ ಹೆಚ್ಚಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. 

ಲಕ್ಷದ್ವೀಪದಲ್ಲಿ 200 ಕೋಟಿ ರೂಪಾಯಿಗಳ ಎರಡು ಯೋಜನೆಗಳಿಗೆ ಹಣಕಾಸು ಸಚಿವಾಲಯವು ಪ್ರಾಥಮಿಕ ಅನುಮೋದನೆಯನ್ನು ನೀಡಿದೆ. ಕಡಮತ್ ದ್ವೀಪದಲ್ಲಿ ಪಶ್ಚಿಮ ಭಾಗದ ಬಂದರು ಸೌಲಭ್ಯಗಳ ಅಭಿವೃದ್ಧಿ ಮತ್ತು ಕಲ್ಪೇನಿ ದ್ವೀಪದಲ್ಲಿ ಪಶ್ಚಿಮ ಭಾಗದ ಬಂದರು ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಡಮತ್ ದ್ವೀಪದಲ್ಲಿ ಪಶ್ಚಿಮ ಭಾಗದ ಬಂದರು ಸೌಲಭ್ಯಗಳ ಅಭಿವೃದ್ಧಿಗೆ 107.86 ಕೋಟಿ ರೂಪಾಯಿ ವೆಚ್ಚವಾಗಿದ್ದರೆ, ಕಲ್ಪೇನಿ ದ್ವೀಪದಲ್ಲಿ ಪಶ್ಚಿಮ ಭಾಗದ ಬಂದರಿನ ಅಭಿವೃದ್ಧಿಗೆ 139.96 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಪರಿಷ್ಕೃತ ಸಾಗರಮಾಲಾ ನಿಧಿಯ ಮಾರ್ಗಸೂಚಿಗಳ ಪ್ರಕಾರ, ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶವು (UTLA) ಅಗತ್ಯವಿರುವ ಅನುಮತಿಗಳೊಂದಿಗೆ ಮುಂದುವರಿಯುತ್ತದೆ ಮತ್ತು ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಟೆಂಡರ್ ಮಾಡಿದ ನಂತರ, ಹರಾಜು ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಅಭಿವೃದ್ಧಿ ಕಾಮಗಾರಿಗಳಿಗೆ ಹತ್ತಿರವಿರುವ ಉನ್ನತ ಮೂಲಗಳು ತಿಳಿಸಿವೆ.

ಮಾಲ್ಡೀವ್ಸ್ ನ ಸಚಿವರು ಮತ್ತು ಅಧಿಕಾರಿಯೊಬ್ಬರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿಯನ್ನು ಅಪಹಾಸ್ಯ ಮಾಡಿದ ನಂತರ ಮಾಲ್ಡೀವ್ಸ್ ಸಂಭಾವ್ಯ ಪ್ರವಾಸೋದ್ಯಮ ಬಹಿಷ್ಕಾರವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ಲಕ್ಷದ್ವೀಪದ ಕಡಲತೀರದ ಉದ್ದಕ್ಕೂ ನಡೆದುಕೊಂಡು ಹೋಗುತ್ತಿರುವ ಚಿತ್ರಗಳನ್ನು ಇತ್ತೀಚೆಗೆ ಪ್ರಧಾನಿ ಮೋದಿಯವರು ಪೋಸ್ಟ್ ಮಾಡಿದ್ದರು. ಅದರಲ್ಲಿ ಮೋದಿ ಮಾಲ್ಡೀವ್ಸ್ನ್ನು ಉಲ್ಲೇಖಿಸದಿದ್ದರೂ, ಅವರ ಪೋಸ್ಟ್ ಮಾಲ್ಡೀವ್ಸ್‌ಗಿಂತ ಹೆಚ್ಚಾಗಿ ಭಾರತೀಯ ದ್ವೀಪಗಳಿಗೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನವಾಗಿ ಕಂಡುಬಂದಿತ್ತು. ಇದಕ್ಕೆ ಪ್ರತಿಯಾಗಿ, ಮಾಲ್ಡೀವ್ಸ್‌ನ ಇಬ್ಬರು ಸಚಿವರು ಮತ್ತು ಅಧಿಕಾರಿಯೊಬ್ಬರು ಮೋದಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ಮಾಲ್ಡೀವ್ಸ್ ಸರ್ಕಾರ ಅವರನ್ನು ಅಮಾನತುಗೊಳಿಸಿದೆ.

ಮಾಲ್ಡೀವ್ಸ್‌ನ ಪ್ರವಾಸೋದ್ಯಮವು ಮುಖ್ಯವಾಗಿ ಭಾರತೀಯ ಪ್ರವಾಸಿಗರ ಮೇಲೆ ಅವಲಂಬಿತವಾಗಿದೆ. ಮಾಲ್ಡೀವ್ಸ್‌ನ ಪ್ರವಾಸೋದ್ಯಮ ವೆಬ್‌ಸೈಟ್‌ನ ಪ್ರಕಾರ, ಭಾರತೀಯ ಪ್ರವಾಸಿಗರು 2 ಲಕ್ಷಕ್ಕೂ ಹೆಚ್ಚು ಪ್ರವಾಸಗಳನ್ನು ನೋಂದಾಯಿಸುವ ಮೂಲಕ ಅಲ್ಲಿಗೆ ಗರಿಷ್ಠ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ನಂತರದ ಸ್ಥಾನಗಳಲ್ಲಿ ರಷ್ಯಾ ಮತ್ತು ಚೀನಾ ದೇಶಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com