
ಮುಂಬೈ: ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿರುವ ಅಂಬಾನಿ ಒಡೆತನದ ಕನ್ವೆನ್ಷನ್ ಸೆಂಟರ್ ನಲ್ಲಿ 29 ವರ್ಷದ ಅನಂತ್ ಅಂಬಾನಿ ಅವರು, ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಅವರೊಂದಿಗೆ ವಿವಾಹವಾದರು.
ಈ ಅದ್ಧೂರಿ ಮದುವೆಯಲ್ಲಿ ಜಗತ್ತಿನ ಅತಿ ಜನಪ್ರಿಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಹಾಲಿವುಡ್ ಸೆಲೆಬ್ರಿಟಿಗಳು, ಬಾಲಿವುಡ್ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿಯಾದರು.
ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಗೌರಿ ಖಾನ್, ಆರ್ಯನ್ ಖಾನ್, ಸುಹಾನಾ ಖಾನ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಸಂಜಯ್ ದತ್, ಜೆನಿಲಿಯಾ ದೇಶಮುಖ್, ರಿತೇಶ್ ದೇಶಮುಖ್, ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಅನೇಕರು ಅನಂತ್ ಅಂಬಾನಿ ಅವರ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಈ ವೈಭವೋಪೇತ ಮದುವೆ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ಜುಲೈ 12ರಂದು ವಿವಾಹ ಮಹೋತ್ಸವ, ಜುಲೈ 13ರಂದು 'ಶುಭ್ ಆಶೀರ್ವಾದ್' ಎಂಬ ಮತ್ತೊಂದು ಕಾರ್ಯಕ್ರಮ ಹಾಗೂ ಜುಲೈ 14ರಂದು ಅಂತಿಮ ಸುತ್ತಿನ 'ಮಂಗಲ್ ಉತ್ಸವ್'(ಆರತಕ್ಷತೆ) ನಡೆಯಲಿದೆ.
Advertisement