
ಮುಂಬೈ: ಅಧಿಕಾರ ಮತ್ತು ಸವಲತ್ತುಗಳ ದುರುಪಯೋಗ ಆರೋಪ ಎದುರಿಸುತ್ತಿರುವ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA) ಮಂಗಳವಾರ ವಾಪಸ್ ಕರೆಸಿಕೊಂಡಿದ್ದು, ಅವರಿಗೆ ನೀಡಲಾಗುತ್ತಿದ್ದ ಪ್ರೊಬೇಷನರಿ ಅವಧಿಯನ್ನು ಸ್ಥಗಿತಗೊಳಿಸಲಾಗಿದೆ.
ನಾಗರಿಕ ಸೇವೆಗೆ ಸೇರಲು ಅಂಗವೈಕಲ್ಯ ಮತ್ತು ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡ ಆರೋಪದ ನಡುವೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆಗೊಂಡ ಖೇಡ್ಕರ್, ತನ್ನ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜುಲೈ 23 ರೊಳಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಗೆ ವಾಪಸ್ ತೆರಳುವಂತೆ ಆಕೆಗೆ ತಿಳಿಸಲಾಗಿದೆ. ಮುಂದಿನ ಅಗತ್ಯ ಕ್ರಮಕ್ಕಾಗಿ ಆಕೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖೇಡ್ಕರ್ ಅವರ ಜಿಲ್ಲಾ ತರಬೇತಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಅಕಾಡೆಮಿ ನಿರ್ಧರಿಸಿದ್ದು, ಮುಂದಿನ ಕ್ರಮಗಳ ಕುರಿತಾಗಿ ನಿರ್ಧರಿಸಲು ಅವರನ್ನು ಅಕಾಡೆಮಿಗೆ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿತಿನ್ ಗಡ್ರೆ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಖೇಡ್ಕರ್, ತನ್ನ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದು, ಸಾಕಷ್ಟು ಮಾನಹಾನಿ ಎದುರಿಸುತ್ತದ್ದೇನೆ. ಮಾಧ್ಯಮಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು, ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದರು. ಪ್ರತ್ಯೇಕ ಕಚೇರಿ ಮತ್ತು ಕಾರಿಗೆ ಬೇಡಿಕೆ ಹಾಗೂ ಸ್ವಂತ ಕಾರಿಗೆ ಕೆಂಪು ದೀಪ ಅಳವಡಿಕೆ ಆರೋಪ ಕುರಿತ ವರದಿಗಳ ನಂತರ 34 ವರ್ಷದ ಪೂಜಾ ಖೇಡ್ಕರ್ ಬೆಳಕಿಗೆ ಬಂದಿದ್ದರು. ಈ ಮಧ್ಯೆ ಯುಪಿಎಸ್ ಸಿಗೆ ಆಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ವಾಸ್ತವಾಂಶ ಕುರಿತು ಅಂಗವೈಕಲ್ಯರ ಆಯುಕ್ತರ ಸೂಚನೆಯಂತೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ಕೇಂದ್ರ ಸರ್ಕಾರ ಖೇಡ್ಕರ್ ಅವರ ಉಮೇದುವಾರಿಕೆ ಪರಿಶೀಲಿಸಲು ಮತ್ತು ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಏಕಸದಸ್ಯ ಸಮಿತಿಯನ್ನು ರಚಿಸಿತು.
Advertisement