
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ನಡೆದ NITI ಆಯೋಗದ ಸಭೆಯಲ್ಲಿ ತಾವು ಮಾತನಾಡುತ್ತಿದ್ದ ವೇಳೆ ತಮ್ಮ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಿಂದ ಅರ್ಧಕ್ಕೆ ಹೊರನಡೆದಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(PIB), ಪಶ್ಚಿಮ ಬಂಗಾಳ ಸಿಎಂ ಆರೋಪ "ತಪ್ಪು ದಾರಿಗೆಳೆಯುವಂತಿಗೆ" ಎಂದು ಹೇಳಿದೆ.
ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನ್ನ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ತಪ್ಪು ಹೇಳಿಕೆಯಾಗಿದೆ ಎಂದು ಪಿಐಬಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ವರ್ಣಮಾಲೆಯ ಪ್ರಕಾರ ಮಮತಾ ಬ್ಯಾನರ್ಜಿ ಅವರಿಗೆ ಮಧ್ಯಾಹ್ನದ ನಂತರ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಕಚೇರಿಯ ಮನವಿಯ ಮೇರೆಗೆ 7ನೇಯವರಾಗಿ ಮಾತನಾಡಲು ಸೂಚಿಸಲಾಗಿತ್ತು. ಅವರು ಮಾತನಾಡುವ ಸಮಯ ಮಗಿದಿದೆ ಎಂದು ಗಡಿಯಾರ ತೋರಿಸಿತ್ತು. ಆದರೆ ಯಾವುದೇ ಬೆಲ್ ಬಾರಿಸಿಲ್ಲ ಎಂದು ಪಿಐಬಿ ಹೇಳಿದೆ.
ಈ ಮಧ್ಯೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಮತಾ ಬ್ಯಾನರ್ಜಿ ಅವರು ತಮ್ಮ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿರುವುದು "ಸಂಪೂರ್ಣ ಸುಳ್ಳು" ಮತ್ತು ಸಭೆಯಲ್ಲಿದ್ದ ಪ್ರತಿಯೊಬ್ಬ ಮುಖ್ಯಮಂತ್ರಿಗಳಿಗೂ "ಮಾತನಾಡಲು ಸರಿಯಾದ ಸಮಯವನ್ನು ನಿಗದಿಪಡಿಸಲಾಗಿದೆ" ಎಂದು ಹೇಳಿದ್ದಾರೆ.
''ನೀತಿ ಆಯೋಗ್ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ನಾವೆಲ್ಲರೂ ಅವರ ಮಾತನ್ನು ಕೇಳಿದ್ದೇವೆ. ಪ್ರತಿಯೊಬ್ಬ ಸಿಎಂಗೂ ಸಮಯ ನಿಗದಿತ ಮಾಡಲಾಗಿತ್ತು ಮತ್ತು ಅದನ್ನು ಪ್ರತಿ ಟೇಬಲ್‌ನ ಮುಂದೆ ಇರುವ ಪರದೆಯ ಮೇಲೆ ಪ್ರದರ್ಶಿಸಲಾಯಿತು... ತಮ್ಮ ಮೈಕ್ ಅನ್ನು ಆಫ್ ಮಾಡಲಾಗಿದೆ ಎಂದು ಅವರು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು ಎಂದು ಸೀತಾರಾಮನ್ ಎಎನ್‌ಐಗೆ ತಿಳಿಸಿದ್ದಾರೆ.
“ಪ್ರತಿಯೊಬ್ಬ ಸಿಎಂಗೂ ಮಾತನಾಡಲು ಸಮಯಾವಕಾಶ ನೀಡಲಾಗಿದೆ... ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿರುವುದು ದುರದೃಷ್ಟಕರ, ಇದು ನಿಜವಲ್ಲ... ಸುಳ್ಳು ಹೇಳಿಕೆ ನೀಡುವ ಬದಲು ಸತ್ಯವನ್ನು ಮಾತನಾಡಬೇಕು" ಎಂದು ಕೇಂದ್ರ ಹಣಕಾಸು ಸಚಿವೆ ತಿರುಗೇಟು ನೀಡಿದ್ದಾರೆ.
Advertisement