
ನವದೆಹಲಿ: ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 65ಕ್ಕೆ ಹೆಚ್ಚಿಸಲು ಅನುವು ಮಾಡಿಕೊಡುವ ಬಿಹಾರ ಸರ್ಕಾರದ ಕಾನೂನು ತಿದ್ದುಪಡಿಯನ್ನು ರದ್ದುಪಡಿಸಿದ ಪಾಟ್ನಾ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಇದರಿಂದಾಗಿ ನಿತೀಶ್ ಕುಮಾರ್ ಸರ್ಕಾರಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.
ಆದಾಗ್ಯೂ, ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ಬಿಹಾರ ಸರ್ಕಾರದ 10 ಅರ್ಜಿಗಳನ್ನು ಆಲಿಸಲು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಒಪ್ಪಿದೆ. ಅರ್ಜಿಗಳ ಬಗ್ಗೆ ನೋಟಿಸ್ ಸಹ ನೀಡದ ಸುಪ್ರೀಂ ಕೋರ್ಟ್, ಮೇಲ್ಮನವಿಗೆ ಅನುಮತಿ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಪೀಠವನ್ನು ಒತ್ತಾಯಿಸಿದರು. ಛತ್ತೀಸ್‌ಗಢದ ಇದೇ ರೀತಿಯ ಪ್ರಕರಣವನ್ನು ಉಲ್ಲೇಖಿಸಿದ ಅವರು, ಆ ಪ್ರಕರಣದಲ್ಲಿ ಉನ್ನತ ನ್ಯಾಯಾಲಯ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದೆ ಎಂದು ಹೇಳಿದರು. ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ಈ ವಿಚಾರವನ್ನು ವಿಚಾರಣೆಗೆ ಪಟ್ಟಿ ಮಾಡುತ್ತೇವೆ. ಆದರೆ, ಯಾವುದೇ ತಡೆಯಾಜ್ಞೆ ನೀಡುವುದಿಲ್ಲ ಎಂದರು.
ಮೀಸಲಾತಿ ಹೆಚ್ಚಳ ಕುರಿತು ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯದ ಉಭಯ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದ ತಿದ್ದುಪಡಿಗಳು ಸಂವಿಧಾನದ ಅಲ್ಟ್ರಾ ವೈರಸ್, ಕಾನೂನಿನಲ್ಲಿ ಕೆಟ್ಟದು ಮತ್ತು ಸಮಾನತೆಯ ಕಾನೂನಿಗೆ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿತ್ತು.
Advertisement