ಮುಂಬೈ: ಕೃಷ್ಣಮೃಗ ಬೇಟೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಗಳು ಅಪ್ರಾಪ್ತರನ್ನು ನೇಮಿಸಿಕೊಂಡಿವೆ ಎಂದು ಮುಂಬೈ ಪೊಲೀಸರು ಸ್ಫೋಟಕ ಮಾಹಿತಿ ನೀಡಿದ್ದಾರೆ.
ನಟ ಸಲ್ಮಾನ್ ಖಾನ್ ನಿವಾಸದ ಮುಂದೆ ಶೂಟೌಟ್ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು ನಟನ ಹತ್ಯೆ ಸಂಚಿನ ಕುರಿತು ಸ್ಫೋಟ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ.
ನಟ ಸಲ್ಮಾನ್ ಖಾನ್ ಹತ್ಯೆಗೆ ಸತತ ಸಂಚು ರೂಪಿಸುತ್ತಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಗಳಾದ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಹತ್ಯೆಗೆ ಅಪ್ರಾಪ್ತರನ್ನು ಬಳಸಿಕೊಳ್ಳಲು ಯೋಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಅಜಯ್ ಕಶ್ಯಪ್ ಮತ್ತು ಮತ್ತೋರ್ವ ಆರೋಪಿ ನಡುವಿನ ವಿಡಿಯೋ ಕಾಲ್ ಸಂಭಾಷಣೆಯಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ನವಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನಡೆಸಿರುವ ಸಂಭಾಷಣೆಯ ಪ್ರಕಾರ, ಆಧುನಿಕ ಶಸ್ತ್ರಾಸ್ತ್ರಗಳಲ್ಲಿ ತರಬೇತಿ ಪಡೆದ ಶಾರ್ಪ್‌ಶೂಟರ್‌ಗಳು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಅವರ ಆದೇಶದಂತೆ ಮುಂಬೈ, ಥಾಣೆ, ನವಿ ಮುಂಬೈ, ಪುಣೆ, ರಾಯಗಡ ಮತ್ತು ಗುಜರಾತ್‌ನಾದ್ಯಂತ ಬೀಡುಬಿಟ್ಟಿದ್ದರು.
ಅದರಂತೆ, ಶಾರ್ಪ್‌ಶೂಟರ್‌ಗಳಾದ ಅನ್ಮೋಲ್ ಬಿಷ್ಣೋಯ್ ಮತ್ತು ರೋಹಿತ್ ಗೋಡಾರಾ ಅವರಿಗೆ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಸಲ್ಮಾನ್ ಖಾನ್ ಹತ್ಯೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದ ಎಂದು ಅಧಿಕಾರಿಗಳು ಪ್ರಥಮ ಮಾಹಿತಿ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಎಫ್‌ಐಆರ್‌ನ ಪ್ರಕಾರ ಕಾರ್ಯಾಚರಣೆಗೆ ವಾಹನವನ್ನು ಒದಗಿಸುವ ಜವಾಬ್ದಾರಿಯನ್ನು ಜಾನ್ ಎಂಬ ವ್ಯಕ್ತಿಗೆ ವಹಿಸಲಾಗಿತ್ತು. ದಾಳಿಯ ನಂತರ, ಗ್ಯಾಂಗ್ ಸದಸ್ಯರು ಕನ್ಯಾಕುಮಾರಿಯಲ್ಲಿ ಮತ್ತೆ ಗುಂಪುಗೂಡಿದ್ದರು ಮತ್ತು ನಂತರ ಸಮುದ್ರ ಮಾರ್ಗದ ಮೂಲಕ ಶ್ರೀಲಂಕಾಕ್ಕೆ ತೆರಳಬೇಕಿತ್ತು. ಶ್ರೀಲಂಕಾಗೆ ತೆರಳಿದ ಬಳಿಕ ಅವರನ್ನು ಬೇರೆ ದೇಶಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಕೆನಡಾ ಮೂಲದ ದರೋಡೆಕೋರ ಅನ್ಮೋಲ್ ಬಿಷ್ಣೋಯ್ ಈ ಪ್ರಯಾಣವನ್ನು ಏರ್ಪಡಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement