
ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಊಹಾಪೋಹ ಜೋರಾಗಿದೆ.
ದಶಕದ ನಂತರ ಭಾರತವು ತನ್ನ ಮೊದಲ ಸಮ್ಮಿಶ್ರ ಸರ್ಕಾರವನ್ನು ಸ್ವಾಗತಿಸಲು ಸಜ್ಜಾಗಿರುವುದರಿಂದ ಯಾರು ಯಾರಿಗೆಲ್ಲಾ ಸಚಿವ ಭಾಗ್ಯ ಸಿಗಲಿದೆ, ಯಾರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಇನ್ನು ಕೆಲವೇ ಹೊತ್ತಿನಲ್ಲಿ ಗೊತ್ತಾಗಲಿದೆ. ಊಹಾಪೋಹಗಳ ನಡುವೆ ಬಿಜೆಪಿಯ ಪ್ರಮುಖರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಧರಾಮೇಂದ್ರ ಪ್ರಧಾನ್, ನಿತ್ಯಾನಂದ ರೈ, ಜ್ಯೋತಿರಾದಿತ್ಯ ಸಿಂಧಿಯಾ, ಎಸ್ ಜೈಶಂಕರ್, ಅಶ್ವಿನಿ ವೈಷ್ಣವ್ ಮತ್ತು ಡಾ ಜಿತೇಂದ್ರ ಸಿಂಗ್ ಹೊಸ ಸಂಪುಟದಲ್ಲಿ ಇರುವುದು ಖಚಿತವಾಗಿದೆ.
ಗೃಹ ಖಾತೆ ಉಳಿಸಿಕೊಳ್ಳುವ ಅಮಿತ್ ಶಾ, ಹಣಕಾಸು ಖಾತೆ ಹೊಸಬರಿಗೆ: ಗೃಹ ಸಚಿವಾಲಯ ನಿರೀಕ್ಷೆಯಂತೆ ಬಿಜೆಪಿಯಲ್ಲೇ ಉಳಿಯಲಿದ್ದು, ಅಮಿತ್ ಶಾ ಎರಡನೇ ಅವಧಿಗೆ ಅಧಿಕಾರ ನಡೆಸಲಿದ್ದಾರೆ. ಆದರೆ ಹಣಕಾಸು ಸಚಿವಾಲಯವನ್ನು ಹಿಂದಿನ ಜವಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ನಿತಿನ್ ಗಡ್ಕರಿ ಮೂರನೇ ಅವಧಿಗೆ ಮುಂದುವರಿಕೆ: ಬಿಜೆಪಿಯ ಹಿರಿಯ ನಾಯಕ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಸತತ ಮೂರನೇ ಅವಧಿಗೆ ಮುಂದುವರಿಯಲಿದ್ದಾರೆ. ಗಡ್ಕರಿ ಅವರು 2014, 2019 ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಗೆದ್ದಿದ್ದಾರೆ.
ಜೈಶಂಕರ್ ಅವರಿಗೆ ವಿದೇಶಾಂಗ ಖಾತೆ: ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಸಂಪುಟದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಜೈಶಂಕರ್ ಅವರು ವಿದೇಶಾಂಗ ಸಚಿವರಾದ ದೇಶದ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ. ಕೋವಿಡ್ 19, ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಗಾಜಾ ಯುದ್ಧದಂತಹ ಕಠಿಣ ಸಮಯದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.
ಶೇಖಾವತ್ ಗೆ ಸ್ಥಾನ: ಬಿಜೆಪಿ ನಾಯಕ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಹೊಸ ಎನ್‌ಡಿಎ ಸಂಪುಟದಲ್ಲಿ ಮೂರನೇ ಅವಧಿಗೆ ಸೇವೆ ಸಲ್ಲಿಸುವ ಸಾಧ್ಯತೆಯಿದೆ. ಈ ಅವಕಾಶಕ್ಕಾಗಿ ಧನ್ಯವಾದ ಅರ್ಪಿಸಿದ ಅವರು, ಪ್ರಧಾನಿ ಅವರು ಸತತ ಮೂರನೇ ಬಾರಿಗೆ ನನ್ನನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಮೂಲಕ ದೇಶ ಸೇವೆ ಮಾಡುವ ಅವಕಾಶವನ್ನು ನೀಡಿದ್ದಾರೆ, ನಾವು ಪ್ರಧಾನಿ ನೇತೃತ್ವದಲ್ಲಿ ತಂಡವಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
Advertisement