
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಯಾತ್ರಾರ್ಥಿಗಳ ಕುಟುಂಬಕ್ಕೆ ತಲಾ ರೂ.10 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ ರೂ.50 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ.
ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ 33 ಮಂದಿ ಜಮ್ಮುವಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಂತೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಈ ವೇಳೆ ಮೃತಪಟ್ಟವರ ಕುಟುಂಬಕ್ಕೆ ತಲಾ ರೂ.10 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ.50 ಸಾವಿರ ಘೋಷಣೆ ಮಾಡಿದ್ದಾರೆ.
ಕಾತ್ರಾದಿಂದ ಶಿವಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಿನ್ನೆ ಉಗ್ರರು ದಾಳಿ ನಡೆಸಿದ್ದರು. ಉಗ್ರರ ದಾಳಿ ಬಳಿಕ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದಿತ್ತು. ಸಂಜೆ 6.15ರ ಸುಮಾರಿಗೆ ಪೋನಿ ಪ್ರದೇಶದ ತೆರ್ಯಾತ್ ಹಳ್ಳಿ ಬಳಿ ಘಟನೆ ನಡೆದಿದೆ.
ಘಟನೆಯಲ್ಲಿ 10 ಮಂದಿ ಯಾತ್ರಾರ್ಥಿಗಳು ಮೃತಪಟ್ಟು, 33 ಮಂದಿ ಗಾಯಗೊಂಡಿರುವುದನ್ನು ರಿಯಾಸಿ ಪೊಲೀಸ್ ವರಿಷ್ಠಾಧಿಕಾರಿ ಮೊಹಿತಾ ಶರ್ಮಾ ದೃಢಪಡಿಸಿದ್ದಾರೆ.
ನೆರೆಯ ರಾಜೌರಿ ಮತ್ತು ಪೂಂಚ್‌ಗೆ ಹೋಲಿಸಿದರೆ ರಿಯಾಸಿ ಜಿಲ್ಲೆಯಲ್ಲಿ ಅಷ್ಟಾಗಿ ಉಗ್ರರ ಉಪಟಳ ಇರಲಿಲ್ಲ. ಈ ದಾಳಿ ಬಳಿಕ ಅಲ್ಲಿಯೂ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ.
Advertisement