
ಹೈದರಾಬಾದ್: ತೆಲಂಗಾಣ ಬಿಜೆಪಿ ಫೈರ್ ಬ್ರಾಂಡ್ ಶಾಸಕ ರಾಜಾಸಿಂಗ್ ರನ್ನು ತೆಲಂಗಾಣ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಗೋಶಾಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿಜದ್ದು, ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮೇದಕ್ ಜಿಲ್ಲೆಯಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಶಾಸಕ ರಾಜಾಸಿಂಗ್‌ರನ್ನು ಮೊದಲೇ ಬಂಧಿಸಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಮಿಯಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಘರ್ಷಣೆ ಪೀಡಿತ ಮೇದಕ್ ಗೆ ಹೋಗುತ್ತಿದ್ದ ರಾಜಾಸಿಂಗ್
ಇನ್ನು ಪೊಲೀಸರು ತಿಳಿಸಿರುವಂತೆ ಗುಂಪುಘರ್ಷಣೆಯಾಗಿರುವ ಘರ್ಷಣೆ ಪೀಡಿತ ಮೇದಕ್ ಜಿಲ್ಲೆಗೆ ರಾಜಾಸಿಂಗ್ ಪ್ರಯಾಣ ಬೆಳೆಸಿದ್ದರು. ರಾಜಾಸಿಂಗ್ ಅಲ್ಲಿಗೆ ಹೋದರೆ ಪರಿಸ್ಥಿತಿ ಕೈ ಮೀರಬಹುದು ಎಂಬ ಉದ್ದೇಶದಿಂದ ಪೊಲೀಸರು ರಾಜಾಸಿಂಗ್ ರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಮುಂಬೈನಲ್ಲಿದ್ದ ರಾಜಾಸಿಂಗ್ ಹೈದರಾಬಾದ್ ಗೆ ಬರುವ ಮಾಹಿತಿ ಇತ್ತು. ರಾಜಾಸಿಂಗ್ ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿರುವ ಪೊಲೀಸರು ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಆವರನ್ನು ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ ನಾಳೆ ಬಕ್ರೀದ್ ನಿಮಿತ್ತ ಮೇದಕ್ ನಲ್ಲಿ ಗೋವುಗಳನ್ನು ರವಾನೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಮೇರೆಗೆ ಬಿಜೆಪಿ ಮತ್ತು ಗೋಸಂರಕ್ಷಕದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ವೇಳೆ ಎರಡೂ ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಎರಡೂ ಸಮುದಾಯದ 45ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಅಂತೆಯೇ ಪೊಲೀಸರು ಮೇದಕ್ ಪಟ್ಟಣ ಮತ್ತು ಮಂಡಲದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಐಜಿ ತಿಳಿಸಿದ್ದಾರೆ.
Advertisement