
ನವದೆಹಲಿ: ಭಾರತದ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಕೆ ಮಾಡದಿರುವಂತೆ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಸಲಹೆ ನೀಡಿದ್ದು, ಈ ಸಲಹೆಗೆ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುಗೇಟು ನೀಡಿದ್ದಾರೆ.
ಕಾಮನ್‌ವೆಲ್ತ್ ದೇಶವಾದ ಕೆರಿಬಿಯನ್ ದ್ವೀಪ ಸಮೂಹದ ಪೋರ್ಟೋ ರಿಕೋದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಚುನಾವಣೆಗಳಲ್ಲಿ ವಿದ್ಯನ್ಮಾನ ಮತ ಯಂತ್ರದ ಬಳಕೆ ಆಗಿತ್ತು. ಈ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎನ್ನುವ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಈ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ವಿದ್ಯುನ್ಮಾನ ಮತ ಯಂತ್ರಗಳನ್ನು ನಿರ್ಮೂಲನೆ ಮಾಡಬೇಕಿದೆ. ಮಾನವರು ಅಥವಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವು ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದಲ್ಲಿ ಈ ಸಾಧ್ಯತೆ ಇದ್ದರೂ ಕೂಡಾ, ಚುನಾವಣಾ ಫಲಿತಾಂಶದಲ್ಲಿ ಅದು ದೊಡ್ಡ ಪರಿಣಾಮ ಬೀರಬಲ್ಲದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಸಲಹೆಗೆ ತಿರುಗೇಟು ನೀಡಿರುವ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು, ಮಸ್ಕ್ ವಾದದಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದ್ದು, ಬೃಹತ್ ವ್ಯಾಪಕ ಸಾಮಾನ್ಯೀಕರಣ ಮಾಡಬೇಡಿ ಎಂದೂ ಬುದ್ದಿಮಾತು ಹೇಳಿದ್ದಾರೆ.
ಈ ರೀತಿಯ ಮಾತುಗಳಿಂದ ಯಾರೊಬ್ಬರೂ ಸುರಕ್ಷಿತ ಡಿಜಿಟಲ್ ಸಾಫ್ಟ್ ವೇರ್ ನಿರ್ಮಿಸಲು ಸಾಧ್ಯವೇ ಇಲ್ಲ ಎಂದು ಹೇಳಿದಂತಾಗುತ್ತದೆ. ಆದರೆ, ಅದು ತಪ್ಪು. ‘ಇವಿಎಂಗೆ ಯಾವುದೇ ಸಂಪರ್ಕವಿಲ್ಲ, ಬ್ಲೂ ಟೂತ್, ವೈಫೈ, ಇಂಟರ್‌ನೆಟ್. ಯಾವುದೇ ಸಂಪರ್ಕವಿಲ್ಲ. ನಿರ್ಮಾಣ ಹಂತದ ಪ್ರೋಗ್ರಾಮಿಂಗ್ ನಿಯಂತ್ರಣಗಳನ್ನು ಬದಲಿಸಲು ಸಾಧ್ಯವೇ ಇಲ್ಲ. ಭಾರತವು ಅತ್ಯಂತ ಸುರಕ್ಷಿತವಾದ ಇವಿಎಂ ಯಂತ್ರಗಳನ್ನ ನಿರ್ಮಿಸಿದೆ. ಒಂದು ವೇಳೆ ಎಲಾನ್ ಮಸ್ಕ್‌ಗೆ ಮಾಹಿತಿ ಬೇಕಿದ್ದರೆ ನಾವು ಅವರಿಗೆ ಪಾಠ ಮಾಡಲು ಸಂತಸಪಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
Advertisement