ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸಬೇಕು, ಚುನಾವಣೆ ದಿನಾಂಕ ಪ್ರಕಟಿಸಬೇಕು: ಒಮರ್ ಅಬ್ದುಲ್ಲಾ
ಶ್ರೀನಗರ: ಭಾರತೀಯ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು. ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶುಕ್ರವಾರ ಇಲ್ಲಿ ಹೇಳಿದರು.
'ಚುನಾವಣಾ ಆಯೋಗದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ಪ್ರಜಾಪ್ರಭುತ್ವವನ್ನು ಕಾಪಾಡುವ ತನ್ನ ಧ್ಯೇಯದ ಭಾಗವಾಗಿ ಚುನಾವಣಾ ಆಯೋಗ ತನ್ನ ಪಾತ್ರವನ್ನು ನಿರ್ವಹಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದು 10 ವರ್ಷಗಳು ಕಳೆದಿವೆ' ಎಂದು ಅಬ್ದುಲ್ಲಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು 'ಒಂದು ದೇಶ ಒಂದು ಚುನಾವಣೆ' ಕುರಿತು ವರದಿ ಸಲ್ಲಿಸಿರುವುದನ್ನು ಉಲ್ಲೇಖಿಸಿ, ಜಮ್ಮು ಮತ್ತು ಕಾಶ್ಮೀರದಿಂದ ನೀತಿಯನ್ನು ಪ್ರಾರಂಭಿಸಲು ಇದು ಸುವರ್ಣಾವಕಾಶವಾಗಿದೆ. ಮಾಜಿ ರಾಷ್ಟ್ರಪತಿಗಳು 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ವರದಿಯನ್ನು ಸಲ್ಲಿಸಿದ್ದಾರೆ. ನಾವು ಅವರಿಂದ ಏನನ್ನು ನಿರೀಕ್ಷಿಸಬಹುದು. ನೀವು ಜಮ್ಮು ಮತ್ತು ಕಾಶ್ಮೀರದಿಂದ ಪ್ರಾರಂಭಿಸದಿದ್ದರೆ, 'ಒಂದು ರಾಷ್ಟ್ರ ಒಂದು ಚುನಾವಣೆ' ಎಂದು ಡೋಲು ಬಾರಿಸುತ್ತಿರುವುದು ಜನರನ್ನು ಮೂರ್ಖರನ್ನಾಗಿಸಲೇ?. ಇಲ್ಲಿ ಚುನಾವಣೆ ನಡೆಯಬೇಕು ಮತ್ತು ಇದೊಂದು ಸುವರ್ಣಾವಕಾಶ ಎಂದರು.
ಅವರು ಇಲ್ಲಿ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಿ ಮತ್ತು ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಘೋಷಿಸಲಿ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ತನ್ನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ಸಭೆ ನಡೆಸಲಿದೆಯೇ ಎಂದು ಕೇಳಿದಾಗ, ಈ ಪ್ರಶ್ನೆಯನ್ನು ಮೈತ್ರಿಕೂಟದ ಪದಾಧಿಕಾರಿಗಳಿಗೆ ಕೇಳಬೇಕು. ಸಭೆ ಇದ್ದರೆ, ನೀವು (ಮೈತ್ರಿಕೂಟದ ಅಧ್ಯಕ್ಷ) ಫಾರೂಕ್ ಅಬ್ದುಲ್ಲಾ ಅವರನ್ನು ಕೇಳಬೇಕು. ನಾನು ಅದರಲ್ಲಿ ಪದಾಧಿಕಾರಿಯಲ್ಲ ಎಂದು ಅಬ್ದುಲ್ಲಾ ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವು ತನ್ನ ಅಭ್ಯರ್ಥಿಗಳನ್ನು ಯಾವಾಗ ಘೋಷಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಬಯಸಿದಾಗ ಘೋಷಿಸುತ್ತೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ