
ನವದೆಹಲಿ: ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಗಳನ್ನು ಉರುಳಿಸುವುದು ನನ್ನ ಬಂಧನದ ಹಿಂದಿನ ಬಿಜೆಪಿಯ ಉದ್ದೇಶವಾಗಿತ್ತು ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ.
ಭಾನುವಾರ ದೆಹಲಿಯಲ್ಲಿ ತಮ್ಮ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಒಡೆಯುವ ಬಿಜೆಪಿಯ ಯೋಜನೆ ವಿಫಲವಾಗಿದೆ ಮತ್ತು ತಮ್ಮ ಬಂಧನದ ನಂತರ ಎಎಪಿ ಮತ್ತಷ್ಟು ಒಗ್ಗೂಡಿದೆ. ನನ್ನ ಬಂಧನಕ್ಕೂ ಮುನ್ನ ಬಿಜೆಪಿಯವರು ಪಕ್ಷವನ್ನು ಒಡೆಯುತ್ತೇವೆ ಮತ್ತು ದೆಹಲಿ ಮತ್ತು ಪಂಜಾಬ್‌ನಲ್ಲಿ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಹೇಳುತ್ತಿದ್ದರು ಎಂದರು.
'ಅವರು ನನ್ನನ್ನು ಬಂಧಿಸಿ, ಪಕ್ಷವನ್ನು ಒಡೆಯುತ್ತೇವೆ ಮತ್ತು ದೆಹಲಿಯಲ್ಲಿ ಮತ್ತು ನಂತರ ಪಂಜಾಬ್‌ನಲ್ಲಿ ಸರ್ಕಾರವನ್ನು ಉರುಳಿಸುವುದಾಗಿ ಯೋಜಿಸಿದ್ದರು. ನನ್ನ ಬಂಧನದ ನಂತರ, ಅವರ ಯೋಜನೆ ವಿಫಲವಾಗಿದೆ. ನೀವು ಸಾಧ್ಯವಿರುವ ಎಲ್ಲವನ್ನೂ ಮಾಡಿದಿರಿ, ಆದರೆ ನೀವಂದುಕೊಂಡದ್ದು ಆಗಲಿಲ್ಲ' ಎಂದು ಕೇಜ್ರಿವಾಲ್ ಹೇಳಿದರು.
ದೇಶದ ರಾಜಕೀಯ ನಿರೂಪಣೆಯು ತಮ್ಮ ಪಕ್ಷಕ್ಕೆ ವಿರುದ್ಧವಾಗಿದೆ. ಆದರೆ, ನಮ್ಮ ಪಕ್ಷದ ಸದಸ್ಯರು ಒಗ್ಗಟ್ಟಿನಿಂದ ನಿಂತಿದ್ದರಿಂದ ಅದನ್ನು ದುರ್ಬಲಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ತಾವು ಜೂನ್ 2ರಂದು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ತಾವು ಮತ್ತೆ ಜೈಲಿಗೆ ಹೋದ ನಂತರ ಅವರೆಲ್ಲರೂ ಪಕ್ಷವನ್ನು ನೋಡಿಕೊಳ್ಳಬೇಕು' ಎಂದು ದೆಹಲಿ ಸಿಎಂ ತಮ್ಮ ಶಾಸಕರಿಗೆ ಹೇಳಿದರು.
ಈಗ ರದ್ದಾಗಿರುವ 2021–2022ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯದಿಂದ (ಇ.ಡಿ) ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಇದೀಗ ಶುಕ್ರವಾರ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.
ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ, ಎಎಪಿ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು 'ಒಂದು ರಾಷ್ಟ್ರ, ಒಂದು ನಾಯಕ' ಮಿಷನ್‌ನಲ್ಲಿ ಎಲ್ಲ ವಿರೋಧ ಪಕ್ಷದ ನಾಯಕರನ್ನು ಕಂಬಿ ಹಿಂದೆ ಹಾಕುವ ಮೂಲಕ ಮತ್ತು ರಾಜಕೀಯವಾಗಿ ಮುಗಿಸುವ ಮೂಲಕ ಸರ್ವಾಧಿಕಾರವನ್ನು ಹೇರಲು ಹೊರಟಿದ್ದಾರೆ ಎಂದು ಆರೋಪಿಸಿದರು.
Advertisement